ಶ್ರೀದೇವಿ ಫಿಸಿಯೋಥೆರಪಿ, ನರ್ಸಿಂಗ್, ಫಾರ್ಮೆಸಿ ಕಾಲೇಜಿನ ಪದವಿ ಪ್ರದಾನ

Update: 2019-03-22 12:46 GMT

ಮಂಗಳೂರು, ಮಾ.22: ನಗರದ ಶ್ರೀದೇವಿ ಫಿಸಿಯೋಥೆರಪಿ, ನರ್ಸಿಂಗ್, ಫಾರ್ಮೆಸಿ ಕಾಲೇಜಿನ ಪದವಿ ಪ್ರದಾನ ಕಾರ್ಯಕ್ರಮ ಹಾಗೂ ವಾರ್ಷಿಕೋತ್ಸವವು ಶುಕ್ರವಾರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ದೇಶದ ಮಾನವ ಸಂಪನ್ಮೂಲದ ಸದ್ಬಳಕೆ ದೇಶೀಯವಾಗಿರಬೇಕು. ಇಲ್ಲಿರುವ ವಿಸ್ತೃತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದರು.

ಶ್ರೀದೇವಿ ಕಾಲೇಜು ಮೌಲ್ಯಯುತ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಂತಹ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಳಿಕ ವೃತ್ತಿ ಜೀವನಕ್ಕೆ ವಿದೇಶಕ್ಕೆ ಹೋಗದೆ, ದೇಶದೊಳಗೆ ಕೌಶಲ್ಯವನ್ನು ಒರೆಗೆ ಹಚ್ಚಬೇಕು. ಇದರಿಂದ ದೇಶದ ಮಾನವ ಸಂಪನ್ಮೂಲ ನಮ್ಮಲ್ಲೇ ಉಳಿದು, ಅನೇಕ ಹೊಸತುಗಳನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಶ್ರೀದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯ ಡಾ. ಭಗವಾನ್ ಬಿ. ಎಸ್. ಅತಿಥಿಯಾಗಿ ಭಾಗವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಮೈನಾ ಎಸ್. ಶೆಟ್ಟಿ, ಉಪಾಧ್ಯಕ್ಷ ನಿಧೀಶ್ ಎಸ್. ಶೆಟ್ಟಿ, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ್ ವಿ. ಕಾಮತ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಭಿಬಿನಾ ವಿಜಯ್, ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ ಪಿ. ಉಪಸ್ಥಿತರಿದ್ದರು.

203 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಈ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನರ್ಸಿಂಗ್ ಕಾಲೇಜು ಪ್ರಾಧ್ಯಾಪಕಿ ಡಾ. ಎಡ್ವಿನಾ ಮೋನಿಸ್ ಸ್ವಾಗತಿಸಿದರು. ಡಾ. ದಿಶಾ ಜಗದೀಶ್ ಮತ್ತು ಸಂಗೀತಾ ಮುರಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News