​ಮಂಗಳೂರು: ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಜನತಾ ನ್ಯಾಯಾಲಯಕ್ಕೆ ಚಾಲನೆ

Update: 2019-03-22 13:07 GMT

ಮಂಗಳೂರು, ಮಾ.22:ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪ್ರಾಥಮಿಕ ಕಾನೂನಿನ ಅರಿವು ಅತ್ಯಗತ್ಯ. ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಮಾಜದಲ್ಲಿ ಕಾನೂನು ಬಗ್ಗೆ ತಿಳಿವಳಿಕೆ ಮೂಡಿಸುವ ಜವಾಬ್ದಾರಿ ನಿಭಾಯಿಸಬೇಕು ಎಂದು ದ.ಕ.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು.

ನಗರದ ವಿವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಜನತಾ ನ್ಯಾಯಾಲಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮಂತೆ ಇತರರು ಎಂದು ಭಾವಿಸಿ ಬದುಕಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ. ಸ್ವಾರ್ಥ ಮನೋಭಾವ ಹೆಚ್ಚುತ್ತಿದ್ದು, ಇನ್ನೊಬ್ಬರ ಕಷ್ಟಕ್ಕೆ, ನೋವಿಗೆ ಸ್ಪಂದಿಸುವ ಮನೋಭಾವ ಇಲ್ಲದಾಗಿದೆ. ನಮ್ಮ ಬದುಕು ಸಮಾಜದ ಒಳಿತಿಗೆ ಮುಡಿಪಾಗಿರಬೇಕು ಎಂದು ಕಾಡ್ಲೂರು ಸತ್ಯನಾರಾಯಣಾಚಾರ್ಯ ನುಡಿದರು.

ಪೊಲೀಸ್ ಉಪಾಯುಕ್ತೆ ಉಮಾಪ್ರಶಾಂತ್ ಮಾತನಾಡಿ ಬಹಳಷ್ಟು ಪ್ರಕರಣಗಳಲ್ಲಿ ನಿಯಮ, ಕಾನೂನು ಗೊತ್ತಿರಲಿಲ್ಲ ಎಂದು ಆರೋಪಿಗಳು ಹೇಳುತ್ತಾರೆ. ಯುವ ಜನರು ಕಾನೂನು ಗೊತ್ತಿಲ್ಲ ಎನ್ನುವಂತಾಗಬಾರದು. ಎಲ್ಲ ಕಾನೂನು ತಿಳಿದುಕೊಳ್ಳಲು ಅಸಾಧ್ಯವಾದರೂ ಬದುಕಿಗೆ ಪೂರಕವಾದ ನಿಯಮಗಳನ್ನು ಅರಿತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಆರ್‌ಟಿಒ ಜಿ.ಎಸ್ ಹೆಗ್ಡೆ, ವಿವಿ ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ.ರಾಮಕೃಷ್ಣ ಬಿ.ಎಂ., ಉಪನ್ಯಾಸಕರಾದ ಸಿದ್ದಿಕ್, ಜಯಾನಂದ್, ಸುಧೀರ್ ಎಂ., ಗಂಗಾಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News