ಪಕ್ಷಾತೀತವಾಗಿ ಸ್ಪರ್ಧಿಸಿದ ಸಹಕಾರಿ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳು ಜಯಗಳಿಸಿದ್ದಾರೆ: ಡಾ.ಎಂ.ಎನ್.ರಾಜೇಂದ್ರ ಕುಮಾರ್

Update: 2019-03-22 14:06 GMT

ಮಂಗಳೂರು,ಮಾ.22:‘‘ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಗೆ ಸಂಬಂಧಿಸಿದಂತೆ ದಕ್ಷಿಣ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯ 16 ಕ್ಷೇತ್ರಗಳಲ್ಲಿ ಪಕ್ಷಾತೀತವಾಗಿ ಸ್ಪರ್ಧಿಸಿದ ಸಹಕಾರಿ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳು ಸಹಕಾರ ಭಾರತಿ ಸಂಘಟನೆಯ ಅಭ್ಯರ್ಥಿಗಳ ವಿರುದ್ಧ ಜಯಗಳಿಸಿರುವುದು ಸಂತಸವನ್ನುಂಟು ಮಾಡಿದೆ’’ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ವ್ಯಾಪ್ತಿಯ ಕೇಂದ್ರ ಸಹಕಾರಿ ಬ್ಯಾಂಕ್ 114 ವರ್ಷಗಳ ಇತಿಹಾಸವನ್ನು ಹೊಂದಿದ್ದು ಕಳೆದ 25 ವರ್ಷಗಳ ಕಾಲ ಈ ಬ್ಯಾಂಕ್‌ನ ಅಧ್ಯಕ್ಷನಾಗಿ ಬ್ಯಾಂಕ್‌ನ ಏಳಿಗೆಗೆ ಶ್ರಮಿಸಿದ್ದೇನೆ. ಈ ಹಿನ್ನೆಲೆಯಲ್ಲಿ ‘ಸಹಕಾರಿ ಕ್ಷೇತ್ರದ ’ಅಭ್ಯರ್ಥಿಗಳಾಗಿ ಸ್ಪರ್ಧಿಸಿದ 16 ಅಭ್ಯರ್ಥಿಗಳು ನನ್ನ ನೇತೃತ್ವದಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳ ವಿರುದ್ಧ ಚುನಾವಣೆಯನ್ನು ಎದುರಿಸಿ ಜಯಗಳಿಸಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ನಾನು ಪಕ್ಷ ರಾಜಕೀಯ ಮಾಡಿಲ್ಲ, ಚುನಾವಣೆಯ ನಂತರ ಎಲ್ಲಾ ಸಹಕಾರಿಗಳು ನನಗೆ ಸಮಾನರು ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ದೇಶಾದ್ಯಂತ ಬಳಕೆಯಾಗುವ ಕಾಮನ್ ಸಾಪ್ಟ್ ವೇರ್: ಮುಂದಿನ ಹಂತದಲ್ಲಿ ಸಹಕಾರಿ ಬ್ಯಾಂಕ್‌ನ ಮೂಲಕ ದೇಶಾದ್ಯಂತ ಬಳಕೆಯಾಗುವ ಕಾಮನ್ ಸಾಪ್ಟ್‌ವೇರನ್ನು ಬಳಕೆಗೆ ತರುವ ಉದ್ದೇಶ ಹೊಂದಿದ್ದೇವೆ. ಸದ್ಯ ರೈತರ ಸಾಲ ಮನ್ನಾದ ಸಂದರ್ಭದಲ್ಲಿ ಸಾಪ್ಟ್ ವೇರ್‌ನ ಸಮಸ್ಯೆ ಬ್ಯಾಂಕ್‌ಗೆ ದೊಡ್ಡ ಕೆಲಸದ ಹೊರೆಯಾಗಿತ್ತು. ಈ ನಿಟ್ಟಿನಲ್ಲಿ ಸುಧಾರಣೆ ಮಾಡುವ ಉದ್ದೇಶವಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News