ನಿಜವಾಗಿಯೂ ನಾವು ದಾಳಿ ನಡೆಸಿದ್ದೇವಾ ?

Update: 2019-03-22 14:29 GMT

ಹೊಸದಿಲ್ಲಿ, ಮಾ. 22: ಭಾರತೀಯ ವಾಯು ಪಡೆ ಬಾಲಕೋಟ್‌ನಲ್ಲಿ ನಡೆಸಿದ ವಾಯು ದಾಳಿಯ ಬಗ್ಗೆ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ವಿವಾದಾತ್ಮಕ ಪ್ರಶ್ನೆ ಎತ್ತಿದ್ದಾರೆ.

“ನಾನು ನ್ಯೂಯಾರ್ಕ್ ಟೈಮ್ಸ್ ಹಾಗೂ ಇತರ ಪತ್ರಿಕೆಗಳನ್ನು ಓದಿರುವುದರಿಂದ ಬಾಲಕೋಟ್ ವಾಯು ದಾಳಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತೇನೆ. ನಿಜವಾಗಿ ನಾವು ದಾಳಿ ನಡೆಸಿದ್ದೇವಾ ?, ನಿಜವಾಗಿಯೂ ನಾವು 300 ಉಗ್ರರನ್ನು ಕೊಂದಿದ್ದೇವಾ?, ನನಗೆ ಗೊತ್ತಿಲ್ಲ” ಎಂದು ಪಿತ್ರೋಡಾ ಅವರು ಸುದ್ದಿ ಸಂಸ್ಥೆಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವಾಯು ದಾಳಿಯ ಪರಿಣಾಮದ ಬಗ್ಗೆ ಪರ್ಯಾಯ ನಿಲುವು ಹೊಂದಿವೆ. ಆದುದರಿಂದ ಕಾರ್ಯಾಚರಣೆಯ ಬಗೆಗಿನ ಸತ್ಯಾಂಶ ತಿಳಿದುಕೊಳ್ಳಲು ಭಾರತೀಯ ಜನರು ಅರ್ಹರು ಎಂದು ಅವರು ಹೇಳಿದರು.

‘‘300 ಉಗ್ರರು ಹತರಾಗಿದ್ದಾರೆ ಎಂದು ನೀವು ಹೇಳುವುದಾದರೆ, ನಾನು ಅದನ್ನು ತಿಳಿಯುವ ಅಗತ್ಯ ಇದೆ. ನಾವೆಲ್ಲರೂ ಅದನ್ನು ತಿಳಿಯುವ ಅಗತ್ಯ ಇದೆ. ಭಾರತದ ಜನರು ಅದನ್ನು ತಿಳಿಯುವ ಅಗತ್ಯ ಇದೆ. ಜಾಗತಿಕ ಮಾದ್ಯಮಗಳ ಯಾರೊಬ್ಬರೂ ಹತರಾಗಿಲ್ಲ ಎಂದು ಹೇಳಿದೆ.’’ ಎಂದು ಅವರು ಹೇಳಿದ್ದಾರೆ.

“ನಾನು ಗಾಂಧಿವಾದಿ, ಹೆಚ್ಚು ಸಹಾನುಭೂತಿ ಹಾಗೂ ಗೌರವದ ಬಗ್ಗೆ ನನಗೆ ಹೆಚ್ಚು ನಂಬಿಕೆ. ವೈಯುಕ್ತಿಕ ಮಾತುಕತೆ ಬಗ್ಗೆ ನನಗೆ ಹೆಚ್ಚು ನಂಬಿಕೆ ಇದೆ. ಎಲ್ಲರೊಂದಿಗೆ ಮಾತುಕತೆ ನಡೆಸಬೇಕು ಎಂದು ನಾನು ಭಾವಿಸುತ್ತೇನೆ. ಪಾಕಿಸ್ತಾನದೊಂದಿಗೆ ಮಾತ್ರ ಯಾಕೆ ಮಾತುಕತೆ ನಡೆಸಬೇಕು ? ನಾವು ಜಗತ್ತಿನೊಂದಿಗೇ ಮಾತುಕತೆ ನಡೆಸಬೇಕು” ಎಂದು ಪಿತ್ರೋಡಾ ಹೇಳಿದ್ದಾರೆ.

ಭಾರತದ ಶಸಸ್ತ್ರ ಪಡೆಯನ್ನು ತುಚ್ಛವಾಗಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷರ ನಂಬಿಕಸ್ತ ಸಲಹೆಗಾರ ಹಾಗೂ ಮಾರ್ಗದರ್ಶಿ ಕಾಂಗ್ರೆಸ್ ಪರವಾಗಿ ಪಾಕಿಸ್ತಾನ ರಾಷ್ಟ್ರೀಯ ದಿನ ಆಚರಣೆ ಆರಂಭಿಸಿದ್ದಾರೆ.

ನರೇಂದ್ರ ಮೋದಿ, ಪ್ರಧಾನಿ

ನಾವು (ಕೇಂದ್ರ ಸರಕಾರ) ಮಾಡಿರುವುದು ತಪ್ಪು ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ. ಯಾವುದೇ ದೇಶ ಹಾಗೆ ಹೇಳಲಾರದು. ಕೇವಲ ಪಾಕಿಸ್ತಾನ ಮಾತ್ರ ಹಾಗೆ ಹೇಳಬಹುದು. ಕಾಂಗ್ರೆಸ್ ಸಿದ್ಧಾಂತದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದರೆ, ಅದು ಈ ದೇಶದ ದುರಂತ.

ಅರುಣ್ ಜೇಟ್ಲಿ, ಕೇಂದ್ರದ ಹಣಕಾಸು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News