‘ಶುಭ ಶುಕ್ರವಾರ’ದ ನಾಮಪತ್ರ: ಶೋಭಾ ಕರಂದ್ಲಾಜೆ

Update: 2019-03-22 14:29 GMT

ಉಡುಪಿ, ಮಾ.22: ಒಳ್ಳೆಯ ಮುಹೂರ್ತದ ಸಲುವಾಗಿ ‘ಶುಭ ಶುಕ್ರವಾರ’ ವಾದ ಇಂದು ಉಭಯ ಜಿಲ್ಲೆಗಳ ಜಿಲ್ಲಾಧ್ಯಕ್ಷರೊಂದಿಗೆ ತೆರಳಿ ನಾನು ನಾಮಪತ್ರವನ್ನು ಸಲ್ಲಿಸಿದ್ದೇನೆ. ಮಾ.26ರ ಮಂಗಳವಾರದಂದು ಸಾರ್ವಜನಿಕವಾಗಿ ಅಧಿಕೃತ ನಾಮಪತ್ರವನ್ನು ಸಲ್ಲಿಸಲಿದ್ದೇನೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಮರು ಸ್ಪರ್ಧೆಗೆ ಪಕ್ಷದಿಂದ ಟಿಕೇಟ್ ಪಡೆದಿರುವ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡು ಸೆಟ್ ನಾಮಪತ್ರಗಳನ್ನು ಸಲ್ಲಿಸಿದ ಬಳಿಕ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.

ಜ್ಯೋತಿಷ್ಯಿಗಳ ಸಲಹೆ ಪಡೆದು ಮಹಾಕಾಳಿ, ದುರ್ಗೆಯರ ಶುಭ ಶುಕ್ರವಾರದಂದು ನಾಮಪತ್ರ ಸಲ್ಲಿಸಿದ್ದೇನೆ. ಮಾ.26 ಮಂಗಳವಾರ ಕೂಡಾ ದೇವಿಯ ಪವಿತ್ರ ದಿನವಾಗಿದೆ. ಅಂದು ಬೃಹತ್ ಸಭೆಯನ್ನು ನಡೆಸಿ ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾ.26ರಂದು ನನ್ನ ನಾಮಪತ್ರ ಸಲ್ಲಿಕೆಯ ಸಂದರ್ಭ ಉಪಸ್ಥಿತರಿರುವರು. ಹಿಂದಿನ ದಿನವೇ ಉಡುಪಿಗೆ ಆಗಮಿಸುವ ಅವರೊಂದಿಗೆ ಬೆಳಗ್ಗೆ 8:30ಕ್ಕೆ ಶ್ರೀಕೃಷ್ಣ ಮಠಕ್ಕೆ ತೆರಳಿ, ಶ್ರೀಕೃಷ್ಣ ಮುಖ್ಯಪ್ರಾಣರು ಹಾಗೂ ಸ್ವಾಮೀಜಿಗಳ ಆಶೀರ್ವಾದ ಪಡೆದು 10:00ಗಂಟೆಗೆ ಚಿತ್ತರಂಜನ್ ಸರ್ಕಲ್‌ನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ದ್ದೇಶಿಸಿ ಮಾತನಾಡಲಿದ್ದೇವೆ. ಬಳಿಕ ಅಪರಾಹ್ನ 12:00ಗಂಟೆಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದೇವೆ ಎಂದು ಶೋಭಾ ವಿವರಿಸಿದರು.

ಅಪರಾಹ್ನದ ಬಳಿಕ ನಿರ್ಮಲಾ ಸೀತಾರಾಮನ್ ಅವರು ಮಲ್ಪೆಗೆ ತೆರಳಿ ಮೀನುಗಾರರೊಂದಿಗೆ ಚರ್ಚೆ ನಡೆಸಲಿದ್ದಾರೆ. ಮೂರು ತಿಂಗಳ ಹಿಂದೆ ನಾಪತ್ತೆಯಾದ ಮೀನುಗಾರರ ಕುರಿತು ಅವರು ಮಾತನಾಡಲಿದ್ದಾರೆ. 26ರ ಸಭೆಗೆ ಎರಡೂ ಜಿಲ್ಲೆಗಳ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.

ಪಕ್ಷದ ಎರಡೂ ಜಿಲ್ಲೆಗಳ ನಾಯಕರು ಹಾಗೂ ಕಾರ್ಯಕರ್ತರು ಈಗಾಗಲೇ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. 2 ಜಿಲ್ಲೆಗಳಲ್ಲೂ ದೊಡ್ಡ ಸಮಾವೇಶ, ಕಾರ್ಯಕರ್ತರ ಸಭೆ, ಮೀನುಗಾರರ ಸಮಾವೇಶ, ಮಹಿಳಾ ಸಮಾವೇಶಗಳನ್ನು ಮಾ.31ರೊಳಗೆ ನಡೆಸಲಿದ್ದೇವೆ. ಮುಂದೆ ಎ.7ರವರೆಗೆ ಬೂತ್ ಮಟ್ಟದ ಸಭೆ, ಆ ಬಳಿಕ ಮನೆ-ಮನೆಗೆ ಭೇಟಿ ನೀಡಿ ಮತಯಾಚನೆ ಹಾಗೂ ಪ್ರಚಾರ ನಡೆಯಲಿದೆ ಎಂದವರು ಹೇಳಿದರು.

ರಾಜ್ಯಾದ್ಯಂತ ಬಿಜೆಪಿ ಪರವಾದ ವಾತಾವರಣವಿದೆ. ಪ್ರಜ್ಞಾವಂತ ಹಾಗೂ ವಿದ್ಯಾವಂತ ಮತದಾರರಿರುವ ಕರಾವಳಿ ಮತ್ತು ಮಲೆನಾಡಿನ ಮಿಶ್ರಣವಾಗಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ನಾವು ಕಳೆದ ಬಾರಿಗಿಂತ ದುಪ್ಪಟ್ಟು ಅಂತರದ ಜಯಗಳಿಸುವ ವಿಶ್ವಾಸ ಹೊಂದಿದ್ದೇವೆ ಎಂದರು.

ಕಳೆದ ಐದು ವರ್ಷಗಳಲ್ಲಿ ತಾನು ಕೇಂದ್ರ ಹಾಗೂ ರಾಜ್ಯದ ಹಲವು ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಮುಂದೆ ಪ್ರವಾಸೋದ್ಯಮ ಅಭಿವೃದ್ಧಿ, ಅಡಿಕೆ-ಕಾಫಿ ಬೆಳೆಗಾರರ ಪರವಾಗಿ ಇನ್ನಷ್ಟು ಧ್ವನಿ ಎತ್ತುವ ಪ್ರಯತ್ನ ನಡೆಸುವುದಾಗಿ ಅವರು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಮಟ್ಟಾರು ರತ್ನಾಕರ ಹೆಗ್ಡೆ, ಜೀವರಾಜ್, ಗುರ್ಮೆ ಸುರೇಶ್ ಶೆಟ್ಟಿ, ಭಾರತಿ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಸಾಣೂರು ನರಸಿಂಹ ಕಾಮತ್ ಉಪಸ್ಥಿತರಿದ್ದರು.

ನೋಟಾ ಅಭಿಯಾನ ಕಾಂಗ್ರೆಸ್‌ನ ಹತಾಶೆ ಪ್ರಯತ್ನ
ತಮ್ಮ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತಿದ್ದ ‘ಗೋ ಬ್ಯಾಕ್ ಶೋಭಕ್ಕಾ’ ಅಭಿಯಾನ, ತಾನು ಅಭ್ಯರ್ಥಿಯಾಗುತಿದ್ದಂತೆ ‘ನೋಟಾ’ಗೆ ನೆಟ್ಟಿಗರು ಕರೆ ನೀಡಿರುವುದರತ್ತ ಶೋಭಾ ಗಮನ ಸೆಳೆದಾಗ ಇದು ಕಾಂಗ್ರೆಸ್‌ನ ಹತಾಶೆಯ ಸಂಕೇತ ಎಂದರು. ಗೋ ಬ್ಯಾಕ್ ಅಭಿಯಾನ ನಡೆಸೋರು ನಮ್ಮ ಕಾರ್ಯಕರ್ತರಲ್ಲ. ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ಅಭ್ಯರ್ಥಿಯೇ ಇಲ್ಲ. ನೋಟಾಕ್ಕೆ ವೋಟ್ ಹಾಕಿ ಅನ್ನೋದು ಕಾಂಗ್ರೆಸ್ ಷಡ್ಯಂತ್ರ. ಆದರೆ ಈ ಕ್ಷೇತ್ರದ ಜನ ಇದಕ್ಕೆ ಬಲಿಯಾಗಲ್ಲ ಎಂದರು.

ತಮ್ಮ ವಿರುದ್ಧ ಸದ್ಯದಲ್ಲೇ ಸಿಡಿ ಬಿಡುಗಡೆ ಮಾಡುತ್ತೇವೆ ಎಂಬ ಎಚ್ಚರಿಕೆಗೂ ಗರಂ ಆದ ಶೋಭಾ ಚುನಾವಣೆ ಬಂದಾಗ ಕಾಂಗ್ರೆಸಿಗರಿಗೆ ಸಿಡಿ ನೆನಪಾಗುತ್ತದೆ. ಅಭಿವೃದ್ಧಿಯಲ್ಲಿ ಗೆಲ್ಲಲಾಗದವರು ಸಿಡಿ ರಾಜಕಾರಣ ಮಾಡುತ್ತಾರೆ. ಇವೆಲ್ಲಾ ಸುಳ್ಳು, ಎಲ್ಲವೂ ನಕಲಿ. ರಾಜ್ಯದಲ್ಲಿರುವ ನಕಲಿ ಸರಕಾರದಂತೆ ನಕಲಿ ಸಿಡಿ, ನಕಲಿ ಡೈರಿ ಬಿಡುಗಡೆಯಾಗಬಹುದು. ಚುನಾವಣೆ ಎದುರಿಸಲಾಗದ ಪುಕ್ಕಲು ರಾಜಕಾರಣಿಗಳು ತಾವೇ ಡೈರಿ, ಸಿಡಿ ಸೃಷ್ಟಿ ಮಾಡಿ ತೇಜೋವಧೆ ನಡೆಸ್ತಾರೆ ಎಂದು ಕೆಂಡ ಕಾರಿದರು.

ಅಭಿವೃದ್ದಿ ತೋರಿಸಿ ಮತ ಕೇಳುವ ನೈತಿಕತೆ ಇವರಿಗಿಲ್ಲ. ಉಡುಪಿ ಚಿಕ್ಕಮಗಳೂರು ಜನ ದೇಶ ಭಕ್ತರು. ದೇಶಕ್ಕಾಗಿ ಕೆಲಸ ಮಾಡುವವರಿಗೆ ಓಟು ಹಾಕುತ್ತಾರೆ. ಕುಟುಂಬ ರಾಜಕಾರಣ ಮಾಡುವವರಿಗೆ ಇಲ್ಲಿನ ಜನ ಓಟು ಹಾಕಲ್ಲ. ವಂಶಪಾರಂಪರ್ಯ ರಾಜಕಾರಣ ನಡೆಸುವವರಿಗೆ ದೇಶಭಕ್ತಿ ಭಾಷೆ ಅರ್ಥವಾಗಲ್ಲ ಎಂದರು.

ಮೋದಿಗೆ ಕುಮಾರಸ್ವಾಮಿ ಸರ್ಟಿಫಿಕೇಟ್ ಬೇಕಾಗಿಲ್ಲ. ಮೋದಿ ಪ್ರಪಂಚ ಕಂಡ ಅದ್ಭುತ ನಾಯಕ. ಮೋದಿ ಆನೆಯ ರೀತಿ. ಯಾರು ಏನೇ ಬಡ್ಕೊಂಡ್ರೂ ಮೋದಿ ಮೇಲೆ ಪರಿಣಾಮ ಬೀರಲ್ಲ. ಮೋದಿಯ ಐದು ವರ್ಷದ ಸಾಧನೆ ಜನ ನೋಡಿದ್ದಾರೆ. ಅಭಿವೃದ್ಧಿ, ದೇಶ ರಕ್ಷಣೆ ನೋಡಿ ಕರಾವಳಿ ಜನ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಕರಾವಳಿ ಜನರ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ನೀಡಿದ ಹೇಳಿಕೆಗೆ ಅವರು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News