ಎ.16ರಿಂದ ಮಂಗಳೂರಿಗೆ ಬೇಸಿಗೆಯ ವಿಶೇಷ ರೈಲು

Update: 2019-03-22 15:31 GMT

ಮಂಗಳೂರು, ಮಾ.22: ಬೇಸಿಗೆ ರಜೆ ಪ್ರಯುಕ್ತ ಪಶ್ಚಿಮ ರೈಲ್ವೆ ವಿಭಾಗದ ಸಹಭಾಗಿತ್ವದಲ್ಲಿ ಮಂಗಳೂರು ಜಂಕ್ಷನ್ ಹಾಗೂ ಮುಂಬೈನ ಬಾಂದ್ರಾ ಟರ್ಮಿನಸ್ ರೈಲು ನಿಲ್ದಾಣಗಳ ನಡುವೆ ವಿಶೇಷ ರೈಲುಗಳು ಸಂಚಾರ ಆರಂಭಿಸಲಿವೆ. ಇದರಿಂದ ರೈಲುಗಳಲ್ಲಿ ಉಂಟಾಗುವ ಹೆಚ್ಚುವರಿ ಜನಸಂದಣಿಯನ್ನು ತಾತ್ಕಾಲಿಕವಾಗಿ ತಡೆಗಟ್ಟಲು ಸಾಧ್ಯವಾಗಲಿದೆ.

ಟ್ರೇನ್ ನಂ.09009/09010 ಬಾಂದ್ರಾ (ಟಿ)- ಮಂಗಳೂರು (ಜಂ.) ರೈಲುಗಳು ವಾರಕ್ಕೊಮ್ಮೆ ಸಂಚರಿಸಲಿದ್ದು, ಈ ಪ್ರಯಾಣಿಕರಿಗೆ ವಿಶೇಷ ದರಗಳು ಅನ್ವಯವಾಗಲಿದೆ.

ಟ್ರೇನ್ ನಂ.09009 ರೈಲು ಬಾಂದ್ರಾದಿಂದ ಎಪ್ರಿಲ್ 16ರಿಂದ ಜೂನ್ 4 ರವರೆಗೆ ಓಡಾಟ ನಡೆಸಲಿದ್ದು, ಈ ರೈಲು ಪ್ರತೀ ಮಂಗಳವಾರ ರಾತ್ರಿ 11:55ಕ್ಕೆ ನಿರ್ಗಮಿಸಿ ಮರುದಿನ ಸಂಜೆ 7:45ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಲಿದೆ.

ಟ್ರೇನ್ ನಂ.09010 ರೈಲು ಮಂಗಳೂರು ಜಂಕ್ಷನ್‌ನಿಂದ ಎಪ್ರಿಲ್ 17ರಿಂದ ಜೂನ್ 5ರವರೆಗೆ ಓಡಾಟ ನಡೆಸಲಿದೆ. ಈ ರೈಲು ಪ್ರತೀ ಬುಧವಾರ ರಾತ್ರಿ 11ಕ್ಕೆ ನಿರ್ಗಮಿಸಿ ಮರುದಿನ ಸಂಜೆ 7:30ಕ್ಕೆ ಬಾಂದ್ರಾ ತಲುಪಲಿದೆ.

ರೈಲು ನಿಲುಗಡೆ ಸ್ಥಳ: ಮಂಗಳೂರು (ಜಂ.)-ಬಾಂದ್ರಾ ನಡುವೆ ಸಂಚರಿಸುವ ಈ ವಿಶೇಷ ರೈಲುಗಳು ಮುಂಬೈನ ಬೊರಿವಲಿ, ವಸೈ ರೋಡ್, ಪನ್ವೆಲ್, ಮಂಗಾನ್, ಖೇಡ್, ಚಿಪ್ಲುನ್, ಸಂಗಮೇಶ್ವರ ರೋಡ್, ರತ್ನಗಿರಿ, ಕಂಕವಲಿ, ಕುಡಲ್, ಸಾವಂತ್‌ವಾಡ್ ರೋಡ್, ಥಿವಿಮ್, ಕುರ್ಮಾಲಿ, ಮಡಗಾವ್ ಜಂ. ಮೂಲಕ ಕರ್ನಾಟಕದ ಕಾರವಾರ, ಕುಮಟಾ, ಮುರ್ಡೇಶ್ವರ, ಭಟ್ಕಳ, ಬೈಂದೂರಿನ ಮೂಕಾಂಬಿಕಾ ರೋಡ್, ಕುಂದಾಪುರ, ಉಡುಪಿ, ಮುಲ್ಕಿ ಮತ್ತು ಸುರತ್ಕಲ್ ಮಾರ್ಗವಾಗಿ ಮಂಗಳೂರನ್ನು ಸಂಪರ್ಕಿಸಲಿವೆ.

ಈ ರೈಲು ಒಟ್ಟು 22 ಎಲ್‌ಎಚ್‌ಬಿ ಕೋಚ್‌ಗಳನ್ನು ಹೊಂದಿದೆ. ಅದರಲ್ಲಿ ಎರಡನೇ ಶ್ರೇಣಿಯ ಒಂದು ಎಸಿ ಕೋಚ್, ಮೂರನೇ ಶ್ರೇಣಿಯ ನಾಲ್ಕು ಎಸಿ ಕೋಚ್‌ಗಳು, 11 ಸ್ಲೀಪರ್ ಕೋಚ್‌ಗಳು, ಮೂರು ಜನರಲ್ ಕೋಚ್‌ಗಳು, ಪ್ಯಾಂಟ್ರಿ ಕಾರ್, ಎರಡು ಜನರಲ್ ಕಮ್ ಎಸ್‌ಎಲ್‌ಆರ್ ಕೋಚ್‌ಗಳಿರಲಿವೆ ಎಂದು ಕೊಂಕಣ್ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್.ಕೆ. ವರ್ಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News