ನಿರುದ್ಯೋಗ, ಕೃಷಿ ಬಿಕ್ಕಟ್ಟಿನ ಮಾಹಿತಿ ಬಚ್ಚಿಟ್ಟಿರುವ ‘ಕಾವಲುಗಾರ’ ದೇಶಕ್ಕೆ ಅಗತ್ಯವೇ ?: ಮಾಯಾವತಿ ಪ್ರಶ್ನೆ

Update: 2019-03-22 17:07 GMT

ಹೊಸದಿಲ್ಲಿ, ಮಾ.22: ಪ್ರಧಾನಿ ನರೇಂದ್ರ ಮೋದಿಯವರ ‘ಮೈ ಭೀ ಚೌಕಿದಾರ್’ ಅಭಿಯಾನವನ್ನು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಶುಕ್ರವಾರ ಕಟುವಾಗಿ ಟೀಕಿಸಿದ್ದಾರೆ. ಮೋದಿಯವರ ಬಿಜೆಪಿ ನೇತೃತ್ವದ ಸರಕಾರವು ನಿರುದ್ಯೋಗ ಮತ್ತು ಕೃಷಿ ಬಿಕ್ಕಟ್ಟು ಕುರಿತು ಮಾಹಿತಿಗಳನ್ನು ಬಚ್ಚಿಡುತ್ತಿದೆ ಎಂದು ಶುಕ್ರವಾರ ಸರಣಿ ಟ್ವೀಟ್‌ಗಳಲ್ಲಿ ಪ್ರತಿಪಾದಿಸಿರುವ ಅವರು,ಇಂತಹ ಪ್ರಮುಖ ಮಾಹಿತಿಗಳನ್ನು ಬಚ್ಚಿಡುತ್ತಿರುವ ‘ಚೌಕಿದಾರ್(ಕಾವಲುಗಾರ)’ ದೇಶಕ್ಕೆ ಅಗತ್ಯವೇ ಎಂದು ಪ್ರಶ್ನಿಸಿದ್ದಾರೆ.

ತನ್ನ ಮತದಾರರು ಮತ್ತು ಮತಗಳನ್ನು ಭದ್ರಗೊಳಿಸಿಕೊಳ್ಳಲು ಬಿಜೆಪಿಯು ತನ್ನ ವ್ಯವಹಾರಗಳನ್ನು ನಡೆಸುತ್ತಿದೆ ಎಂದಿರುವ ಅವರು,ರಫೇಲ್ ಒಪ್ಪಂದದ ವಿವರಗಳುಳ್ಳ ವರ್ಗೀಕೃತ ಕಡತವು ಕಳವಾದರೆ ಅದು ಬಿಜೆಪಿಗೆ ದೊಡ್ಡ ಕಳವಳದ ವಿಷಯವಲ್ಲ,ಆದರೆ ನಿರುದ್ಯೋಗ, ಕಾರ್ಮಿಕರು ಮತ್ತು ರೈತರ ದಯನೀಯ ಸ್ಥಿತಿಯ ಕುರಿತು ಮಾಹಿತಿ ಬಹಿರಂಗಗೊಳ್ಳದಂತೆ ಅವರು ಕಾವಲು ಕುಳಿತಿದ್ದಾರೆ. ಇಂತಹ ಕಾವಲುಗಾರ ದೇಶಕ್ಕೇ ಬೇಕೇ ಎಂದು ಟ್ವೀಟಿಸಿದ್ದಾರೆ.

ಕಾನೂನು ಮತ್ತು ಸಂವಿಧಾನಕ್ಕೆ ತಮ್ಮ ನಾಯಕರ ಬದ್ಧತೆ ಮಾತ್ರ ಜನರ ಅಗತ್ಯವಾಗಿದೆ ಎಂದಿರುವ ಅವರು, ಬಿಜೆಪಿ ನಾಯಕರು ಜನರನ್ನು ಮರುಳುಗೊಳಿಸಲು ತಮ್ಮನ್ನು ಚೌಕಿದಾರ್ ಎಂದು ಘೋಷಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತಹ ಬಿಜೆಪಿ ನಾಯಕರು ತಾವು ಸಾರ್ವಜನಿಕ ಸೇವಕರಾಗಿರಬೇಕೇ ಅಥವಾ ಕಾವಲುಗಾರರಾಗಬೇಕೇ ಎಂಬ ದ್ವಂದ್ವದಲ್ಲಿ ಸಿಲುಕಿದ್ದಾರೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News