ಉಡುಪಿ: ಸಿಐಟಿಯುನಿಂದ ಕಾರ್ಮಿಕರ ಸನ್ನದು ಬಿಡುಗಡೆ

Update: 2019-03-22 16:18 GMT

ಉಡುಪಿ, ಮಾ.22:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಸೆಂಟರ್ ಆ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ 43 ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಕಾರ್ಮಿಕರ ಸನ್ನದು (ಕಾರ್ಮಿಕರ ಬೇಡಿಕೆ) ಕೈಪಿಡಿಯನ್ನು ಶುಕ್ರವಾರ ಬಿಡುಗಡೆಗೊಳಿಸಿತು.

ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ವಿಶ್ವನಾಥ್ ರೈ ಕಾರ್ಮಿಕರ ಸನ್ನದು ಬಿಡುಗಡೆಗೊಳಿಸಿ ಮಾತನಾಡಿ, ಇದುವರೆಗೆ ಕಾರ್ಮಿಕರ ಬೇಡಿಕೆಯನ್ನು ಈಡೇರಿಸುವ ಸರಕಾರ ಬಂದಿಲ್ಲ. ಎಚ್.ಡಿ.ದೇವೇಗೌಡ ಪ್ರಧಾನಿಯಾಗಿದ್ದ ಕಾಲದಲ್ಲಿ ಹಾಗೂ ಯುಪಿಎ ಸರಕಾರಕ್ಕೆ ಎಡಪಕ್ಷಗಳು ಬೆಂಬಲ ನೀಡಿದ ಸಂದರ್ಭದಲ್ಲಿ ಕಾರ್ಮಿಕರ ಕೆಲವೊಂದು ಬೇಡಿಕೆಗಳು ಈಡೇರಿದ್ದವು. ಆ ಬಳಿಕ ಕಾರ್ಮಿಕರ ಬೇಡಿಕೆಗಳ ಕುರಿತಂತೆ ಎಲ್ಲಾ ಸರಕಾರ ನಿರ್ಲಕ್ಷವನ್ನು ತೋರಿಸುತ್ತಿವೆ. ಮುಂದಿನ ಸರಕಾರದ ಮೇಲೆ ಒತ್ತಡ ಹೇರಿ ಕೆಲವಾದರೂ ಬದಲಾವಣೆಗಳಾಗುವ ನಿರೀಕ್ಷೆಯಲ್ಲಿದ್ದೇವೆ ಎಂದರು.

ಕಾರ್ಮಿಕರು, ರೈತರು ಮತ್ತು ದುಡಿಯುವ ಜನತೆಯೊಂದಿಗೆ ಸೇರಿ ಈ ದೇಶದಲ್ಲಿ ಸಂಪತ್ತನ್ನು ಸೃಷ್ಠಿಸುತ್ತಿವೆ. ರಾಷ್ಟ್ರದ ಆರ್ಥಿಕ ಬೆಳವಣಿಗೆ ಕೊಡುಗೆ ನೀಡುತ್ತಿರುವ ಇವರ ಜ್ವಲಂತ ಪ್ರಶ್ನೆಗಳು, ಗಂಭೀರ ಸಮಸ್ಯೆಗಳು ಮತ್ತು ತುರ್ತು ಬೇಡಿಕೆಗಳನ್ನು ಕೇಂದ್ರ ಸರಕಾರ ನಿರ್ಲಕ್ಷಿಸುತ್ತಾ ಬಂದಿವೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ಶಂಕರ್ ಆರೋಪಿಸಿದರು.

ಸಮಾನ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ಖಾಯಂ ನೌಕರರಂತೆ ಸಮಾನ ವೇತನ ಮತ್ತು ಸವಲತ್ತುಗಳನ್ನು ಕಡ್ಡಾಯವಾಗಿ ನೀಡಬೇಕೆಂಬ ಸುಪ್ರೀಂ ಕೋರ್ಟ್‌ನ ತೀರ್ಮಾನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ರಾಷ್ಟ್ರೀಯ ಕನಿಷ್ಠ ವೇತನವನ್ನು ನಿಗದಿ ಪಡಿಸಬೇಕು. ಮಾಸಿಕ ಕನಿಷ್ಠ ಪಿಂಚಣಿ 6000 ರೂ.ವನ್ನು ಬೆಲೆ ಏರಿಕೆಗೆ ಅನುಗುಣವಾಗಿ ಗ್ರಾಹಕ ಬೆಲೆ ಸೂಚ್ಯಂಕಕ್ಕೆ ಹೊಂದಿಸಲಾದ ತುಟ್ಟಿಭತ್ಯೆ ಸಹಿತ ಎಲ್ಲರಿಗೂ ಖಾತ್ರಿ ಪಡಿಸಬೇಕು ಎಂದರು.

ಕಾರ್ಪೋರೇಟ್ ವಲಯಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ಕಡಿತಗೊಳಿಸಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರ ಫಸಲುಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಬೇಕು.ರೈತರ ಸಾಲ ಮನ್ನಾ ಮಾಡಬೇಕು. ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ 300 ದಿನಗಳ ಕೆಲಸವನ್ನು ಒದಗಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ತಡೆ ಕುರಿತು ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಇದೂ ಸೇರಿದಂತೆ ನಾನಾ ಬೇಡಿಕೆಗಳನ್ನೊಳಗೊಂಡ ಸನ್ನದನ್ನು ರಾಷ್ಟ್ರವ್ಯಾಪ್ತಿ ಬಿಡುಗಡೆ ಮಾಡಿದ್ದೇವೆ ಎಂದು ಶಂಕರ್ ನುಡಿದರು.

ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಜನಪ್ರತಿನಿಧಿಗಳಿಗೆ ಈ ಸನ್ನದು ಮುಟ್ಟಿಸುತ್ತೇವೆ. ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಿಗೆ ತೆರಳಿ ಅವರಿಗೆ ಈ ಬಗ್ಗೆ ಅರಿವು ಮೂಡಿಸುತ್ತೇವೆ. ಚುನಾವಣೆಯಲ್ಲಿ ನಾಯಕರ ಆಯ್ಕೆಯ ಕುರಿತು ಅರಿವು ಮೂಡಿಸುತ್ತೇವೆ ಎಂದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಕೆ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಸರಕಾರ ಬಿಎಸ್‌ಎನ್‌ಎಲ್‌ನಂತಹ ಸರಕಾರಿ ಸಂಸ್ಥೆಯನ್ನೇ ನಾಶ ಮಾಡುತ್ತಿದೆ. 4ಜಿ ಇಂಟರ್‌ನೆಟ್‌ನ್ನು ಖಾಸಗಿಯವರಿಗೆ ನೀಡಿ ಬಿಎಸ್‌ಎನ್‌ಎಲ್‌ಗೆ ಇನ್ನೂ ನೀಡದೇ ಅದನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ.ಅರೆಕಾಲಿಕ ಕೆಲಸಗಾರರಿಗೆ ಕಳೆದ 6 ತಿಂಗಳಿನಿಂದ ವೇತನವನ್ನೇ ನೀಡಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ್ ಗೊಲ್ಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News