8,100 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಆರೋಪಿ ಹಿತೇಶ್ ಪಟೇಲ್ ಬಂಧನ

Update: 2019-03-22 16:25 GMT

ಹೊಸದಿಲ್ಲಿ, ಮಾ.22: 8,100 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಪ್ರಕರಣದ ಆರೋಪಿ ಹಿತೇಶ್ ಪಟೇಲ್ ಎಂಬಾತನನ್ನು ಅಲ್ಬೇನಿಯದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯ ಹೊರಡಿಸಿದ ಇಂಟರ್‌ಪೋಲ್ ನೋಟಿಸ್ ಆಧಾರದಲ್ಲಿ ಪಟೇಲ್‌ನನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ. ಸ್ಟರ್ಲಿಂಗ್ ಬಯೋಟೆಕ್ ಗ್ರೂಪ್ ಮೂಲಕ ಹಿತೇಶ್ ಪಟೇಲ್ ಬ್ಯಾಂಕ್‌ಗಳಿಗೆ ವಂಚನೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಈತನನ್ನು ಮಾರ್ಚ್ 20ರಂದು ಅಲ್ಬೇನಿಯದ ಟಿರನದಲ್ಲಿ ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಈ ಪ್ರಕರಣದಲ್ಲಿ ಹಿತೇಶ್ ಪಟೇಲ್ ಆರೋಪಿಯಾಗಿದ್ದು ಆತನ ಬಾವಂದಿರಾದ ನಿತಿನ್ ಮತ್ತು ಚೇತನ್ ಸಂದೇಸರ ಮುಖ್ಯ ಆರೋಪಿಗಳಾಗಿದ್ದಾರೆ.

ಪಟೇಲ್‌ನನ್ನು ಶೀಘ್ರದಲ್ಲಿ ಭಾರತಕ್ಕೆ ಗಡಿಪಾರು ಮಾಡುವ ನಿರೀಕ್ಷೆಯಿದೆ. ಜಾರಿ ನಿರ್ದೇಶನಾಲಯ ಮಾರ್ಚ್ 11ರಂದು ಪಟೇಲ್ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಸಂದೇಸರ ಸಹೋದರರು ಬಳಸುತ್ತಿದ್ದ ನಕಲಿ ಶೆಲ್ ಕಂಪೆನಿಗಳಿಗೆ ನಿರ್ದೇಶಕರನ್ನು ಗೊತ್ತು ಮಾಡುವಲ್ಲಿ ಪಟೇಲ್ ಪ್ರಮುಖ ಪಾತ್ರವಹಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News