ಪ್ರತ್ಯೇಕತಾವಾದಿಗಳಿಗೆ ಆಹ್ವಾನ: ಪಾಕ್ ರಾಷ್ಟ್ರೀಯ ದಿನ ಬಹಿಷ್ಕರಿಸಿದ ಭಾರತ

Update: 2019-03-22 16:28 GMT

ಹೊಸದಿಲ್ಲಿ, ಮಾ.22: ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಿಗೆ ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಈ ಬಾರಿ ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ನಡೆಯಲಿರುವ ಪಾಕಿಸ್ತಾನ ರಾಷ್ಟ್ರೀಯ ದಿನ ಸಮಾರಂಭಕ್ಕೆ ಭಾರತ ತನ್ನ ಪ್ರತಿನಿಧಿಗಳನ್ನು ಕಳುಹಿಸದೆ ಇರಲು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಸುಮಾರು 30 ಹುರಿಯತ್ ನಾಯಕರಿಗೆ ಆಹ್ವಾನ ನೀಡಲಾಗಿದೆ. ಇದು ಪಾಕಿಸ್ತಾನದ ದ್ವಂದ್ವ ನಿಲುವನ್ನು ತೋರಿಸುತ್ತದೆ. ಪಾಕ್ ಭಾರತದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಹಾಗಾಗಿ ಪಾಕ್ ರಾಷ್ಟ್ರೀಯ ದಿನವನ್ನು ಬಹಿಷ್ಕರಿಸಲು ನಾವು ನಿರ್ಧರಿಸಿದ್ದೇವೆ ಎಂದು ಹಿರಿಯ ಅಧಿಕಾರಿಗಳು ಎನ್‌ಡಿಟಿವಿಗೆ ತಿಳಿಸಿದ್ದಾರೆ. ಸದ್ಯ ಪುಲ್ವಾಮ ಉಗ್ರದಾಳಿಯ ನಂತರ ಕಲುಷಿತಗೊಂಡಿರುವ ಭಾರತ-ಪಾಕ್ ಸಂಬಂಧದ ಮಧ್ಯೆಯೇ ಪಾಕ್ ರಾಷ್ಟ್ರೀಯ ದಿನವನ್ನು ಬಹಿಷ್ಕರಿಸುವ ನಿರ್ಧಾರವನ್ನು ಭಾರತ ತೆಗೆದುಕೊಂಡಿದೆ.

ಕಳೆದ ತಿಂಗಳು ಸರಕಾರ ಪ್ರತ್ಯೇಕತಾವಾದಿಗಳ ವಿರುದ್ಧ ನಡೆಸಿದ ಕಾರ್ಯಾಚರಣೆಯ ಪರಿಣಾಮವಾಗಿ ಬಹಳಷ್ಟು ಪ್ರತ್ಯೇಕತಾವಾದಿ ನಾಯಕರು ಒಂದೋ ಜೈಲಿನಲ್ಲಿರುವ ಅಥವಾ ಗೃಹಬಂಧಿಗಳಾಗಿರುವ ಕಾರಣ ಯಾರೂ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ. ಸದ್ಯ ಸ್ವತಂತ್ರವಾಗಿರುವ ಪ್ರತ್ಯೇಕತಾವಾದಿಗಳು ಬಂಧನ ಭೀತಿಯಿಂದಾಗಿ ಈ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ ಎಂದು ಪ್ರತ್ಯೇಕತಾವಾದಿ ನಾಯಕರೊಬ್ಬರು ತಿಳಿಸಿದ್ದಾರೆ.

 ಕಾಶ್ಮೀರ ಮತ್ತು ಇತರ ವಿಷಯಗಳಲ್ಲಿರುವ ಭಿನ್ನಾಭಿಪ್ರಾಯಗಳ ಬಗ್ಗೆ ಭಾರತದೊಂದಿಗೆ ನೇರವಾಗಿ ಮಾತುಕತೆ ನಡೆಸುವಂತೆ ಹಿಂದೆಯೂ ಭಾರತ ಸರಕಾರ ಪಾಕಿಸ್ತಾನಕ್ಕೆ ತಿಳಿಸಿತ್ತು. ಜೊತೆಗೆ ಹುರಿಯತ್ ನಾಯಕರ ಜೊತೆ ಪಾಕಿಸ್ತಾನ ನೇರ ಸಂಪರ್ಕ ಹೊಂದುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News