ಪಾಕ್‌ಗೆ ಚೀನಾದಿಂದ 2.1 ಬಿಲಿಯ ಡಾಲರ್ ಸಾಲ

Update: 2019-03-22 16:30 GMT

ಇಸ್ಲಾಮಾಬಾದ್, ಮಾ. 22: ಪಾಕಿಸ್ತಾನದ ಕುಸಿಯುತ್ತಿರುವ ಆರ್ಥಿಕತೆಗೆ ಚೈತನ್ಯ ಒದಗಿಸುವುದಕ್ಕಾಗಿ ಅದರ ಮಿತ್ರ ದೇಶ ಚೀನಾ ಸೋಮವಾರದ ಒಳಗೆ 2.1 ಬಿಲಿಯ ಡಾಲರ್ (ಸುಮಾರು 14,500 ಕೋಟಿ ಭಾರತೀಯ ರೂಪಾಯಿ) ಸಾಲ ನೀಡಲಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವಾಲಯ ಘೋಷಿಸಿದೆ.

ಚೀನಾ ಸರಕಾರ ನೀಡುತ್ತಿರುವ 2.1 ಬಿಲಿಯ ಡಾಲರ್ ಸಾಲ ಹಸ್ತಾಂತರಕ್ಕೆ ಸಂಬಂಧಿಸಿದ ಎಲ್ಲ ಔಪಚಾರಿಕತೆಗಳನ್ನು ಪೂರೈಸಲಾಗಿದೆ ಹಾಗೂ ಹಣವನ್ನು ಪಾಕಿಸ್ತಾನ್ ಸ್ಟೇಟ್ ಬ್ಯಾಂಕ್‌ನ ಖಾತೆಗೆ ಮಾರ್ಚ್ 25, ಸೋಮವಾರದ ಒಳಗೆ ವರ್ಗಾಯಿಸಲಾಗುತ್ತದೆ ಎಂದು ಹಣಕಾಸು ಸಚಿವಾಲಯದ ಸಲಹೆಗಾರ ಹಾಗೂ ವಕ್ತಾರ ಖಾಕನ್ ನಜೀಬ್ ಖಾನ್ ಹೇಳಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಇಸ್ಲಾಮಾಬಾದ್‌ನ ಕುಸಿಯುತ್ತಿರುವ ವಿದೇಶಿ ವಿನಿಮಯವನ್ನು ತಡೆಯಲು ಸೌದಿ ಅರೇಬಿಯ ಮತ್ತು ಯುಎಇ ದೇಶಗಳು ಈಗಾಗಲೇ ತಲಾ 1 ಬಿಲಿಯ ಡಾಲರ್ (ಸುಮಾರು 6,900 ಕೋಟಿ ಭಾರತೀಯ ರೂಪಾಯಿ) ಸಾಲವನ್ನು ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಆರ್ಥಿಕ ಸಂಕಷ್ಟದಿಂದ ಪಾರಾಗುವುದಕ್ಕಾಗಿ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದಲೂ ಸಾಲ ಪಡೆಯಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ.

2018 ನವೆಂಬರ್‌ನಲ್ಲಿ ಚೀನಾ ಪ್ರಧಾನಿ ಲಿ ಕೆಕಿಯಾಂಗ್ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಡುವೆ ಬೀಜಿಂಗ್‌ನಲ್ಲಿ ಮಾತುಕತೆ ನಡೆದ ಬಳಿಕ, ಪಾಕಿಸ್ತಾನದ ಪ್ರಸಕ್ತ ಆರ್ಥಿಕ ಸಂಕಷ್ಟವನ್ನು ದೂರ ಮಾಡುವುದಕ್ಕಾಗಿ ಅದಕ್ಕೆ ನೆರವು ನೀಡಲು ಸಿದ್ಧವಾಗಿದೆ ಎಂದು ಚೀನಾ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News