ಗಮನ ಸೆಳೆದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ರ ‘ಮೈತ್ರಿ ಶಾಲು’!

Update: 2019-03-22 16:37 GMT

ಉಡುಪಿ, ಮಾ.22: ‘ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್, ಹಾಲು-ಜೇನಿನಂತೆ ಬೆರೆಯಲಿದೆ. ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಮೈತ್ರಿ ಧರ್ಮದಂತೆ ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸುತ್ತೇನೆ.’

ಹೀಗೆಂದು ಹೇಳಿದವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಸರಕಾರದ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಶುಕ್ರವಾರ ರಾತ್ರಿ ತವರಿಗೆ ಆಗಮಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್. ನಗರಕ್ಕೆ ಆಗಮಿಸಿದವರು ನೇರವಾಗಿ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ಚಿಹ್ನೆಯನ್ನು ಮುದ್ರಿಸಿರುವ ಶಾಲನ್ನು ಧರಿಸಿಕೊಂಡು ಆಗಮಿಸಿದ ಪ್ರಮೋದ್ ಮಧ್ವರಾಜ್ ಅವರನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸೇರಿದಂತೆ ನಾಯಕರು ಹಾಗೂ ಕಾರ್ಯಕರ್ತರು ಸ್ವಾಗತಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತದಾರರು ಕೆಲಸ ಮಾಡುವ ಸಂಸದರನ್ನು ಆಯ್ಕೆ ಮಾಡಬೇಕು. ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಈ ಅವಕಾಶ ಸಿಕ್ಕಿದೆ. ಮನೆಗೆ ಹೋಗುವ ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟಿದ್ದೇನೆ. ಮಾ.25ರಂದು ನಾಮಪತ್ರ ಸಲ್ಲಿಸುತ್ತೇನೆ. ಎರಡು ದಿನದಲ್ಲಿ ಎರಡು ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ಉಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಗೆದ್ದು ಬಂದರೆ ರಾಜಧರ್ಮ ಪಾಲಿಸುತ್ತೇನೆ ಎಂದರು.

ವಿಶೇಷ ಶಾಲಿನ ಕುರಿತು ಪ್ರತಿಕ್ರಿಯಿಸಿದ ಪ್ರಮೋದ್ ಮಧ್ವರಾಜ್, ಇಂತಹ ಶಾಲು ಈವರೆಗೆ ಯಾರೂ ತಯಾರು ಮಾಡಿಲ್ಲ. ಈ ಶಾಲನ್ನು ಎ.18ರವರೆಗೆ ತೊಟ್ಟಿರುತ್ತೇನೆ. ಚಿಹ್ನೆಯ ಬಗ್ಗೆ ಜನರಿಗೆ ಉತ್ತರ ಕೊಟ್ಟು ಸುಸ್ತಾಗಿದೆ ಎಂದು ನಗುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News