ಪ.ಬಂಗಾಳ: ಬಿಜೆಪಿ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ

Update: 2019-03-22 16:55 GMT

ಕೋಲ್ಕತಾ, ಮಾ.22: ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕಳೆದ ಬಾರಿಗಿಂತ ಅಧಿಕ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿರುವ ಬಿಜೆಪಿ , ರಾಜ್ಯದಲ್ಲಿ ಸ್ಪರ್ಧಿಸಲಿರುವ 28 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಬಹುತೇಕ ಹೊಸಮುಖಗಳಿಗೇ ಮಣೆ ಹಾಕಿದೆ. 

28 ಅಭ್ಯರ್ಥಿಗಳಲ್ಲಿ 25 ಹೊಸಬರಿಗೆ ಟಿಕೆಟ್ ನೀಡಲಾಗಿದೆ. ಪ್ರಥಮ ಪಟ್ಟಿಯಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಸಿಡಿದೆದ್ದು ಬಿಜೆಪಿ ಸೇರ್ಪಡೆಗೊಂಡ ಐದು ಮಂದಿ ಹಾಗೂ ಸಿಪಿಐ(ಎಂ)ನಿಂದ ಸೇರ್ಪಡೆಗೊಂಡ ಒಬ್ಬರ ಹೆಸರೂ ಸೇರಿದೆ. ಅಲ್ಲದೆ ನಾಲ್ವರು ಮಹಿಳೆಯರು, ಓರ್ವ ಮುಸ್ಲಿಂ ಅಭ್ಯರ್ಥಿ ಬಿಜೆಪಿಯ ಮೊದಲ ಪಟ್ಟಿಯಲ್ಲಿದ್ದಾರೆ. 2014ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 2 ಸ್ಥಾನ ಗೆದ್ದಿದ್ದರೆ ಈ ಬಾರಿ 23 ಸ್ಥಾನ ಗೆಲ್ಲುವ ಗುರಿ ಹೊಂದಿದೆ.

ಅಸಾನೊಲ್ ಕ್ಷೇತ್ರದ ಸಂಸದ, ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅದೇ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದು, ಟಿಎಂಸಿ ಅಭ್ಯರ್ಥಿ, ಸಿನೆಮಾ ನಟಿ ಮೂನ್ ಮೂನ್ ಸೇನ್‌ರನ್ನು ಎದುರಿಸಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಮೇದಿನಿಪುರ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದು ಟಿಎಂಸಿಯ ಮನಾಸ್ ಭುನಿಯಾರನ್ನು ಎದುರಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹ ಕೋಲ್ಕತಾ ಉತ್ತರ ಕ್ಷೇತ್ರದಲ್ಲಿ ಟಿಎಂಸಿಯ ಸುದೀಪ್ ಬಂದೋಪಾಧ್ಯಾಯರನ್ನು ಎದುರಿಸಲಿದ್ದಾರೆ.

ಇತ್ತೀಚೆಗಷ್ಟೇ ಟಿಎಂಸಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಅರ್ಜುನ್ ಸಿಂಗ್ ಬರ್ರಾಕ್‌ಪುರ ಸಂಸದ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News