ಬೋಯಿಂಗ್ ಕಂಪೆನಿಯ 49 ವಿಮಾನ ಖರೀದಿ ಕರಾರನ್ನು ರದ್ದುಪಡಿಸಿದ ‘ಗರುಡ’

Update: 2019-03-22 16:58 GMT

ಜಕಾರ್ತ (ಇಂಡೋನೇಶ್ಯ), ಮಾ. 22: ಅಮೆರಿಕದ ವಿಮಾನ ನಿರ್ಮಾಣ ಕಂಪೆನಿ ಬೋಯಿಂಗ್‌ನ ‘737 ಮ್ಯಾಕ್ಸ್ 8’ ಮಾದರಿಯ ಎರಡು ವಿಮಾನಗಳು ಇತ್ತೀಚೆಗೆ ಪತನಗೊಂಡಿರುವ ಹಿನ್ನೆಲೆಯಲ್ಲಿ, ಈ ಮಾದರಿಯ 49 ವಿಮಾನಗಳ ಖರೀದಿಗಾಗಿ ಮಾಡಿರುವ ಕರಾರನ್ನು ಇಂಡೋನೇಶ್ಯದ ರಾಷ್ಟ್ರೀಯ ವಿಮಾನಯಾನ ಕಂಪೆನಿ ‘ಗರುಡ’ ರದ್ದುಪಡಿಸಿದೆ ಎಂದು ಕಂಪೆನಿ ಶುಕ್ರವಾರ ತಿಳಿಸಿದೆ.

‘‘ಖರೀದಿ ಕರಾರನ್ನು ರದ್ದುಪಡಿಸುವಂತೆ ಕೋರಿ ನಾವು ಬೊಯಿಂಗ್ ಕಂಪೆನಿಗೆ ಪತ್ರವೊಂದನ್ನು ಕಳುಹಿಸಿದ್ದೇವೆ’’ ಎಂದು ‘ಗರುಡ’ ವಕ್ತಾರ ಇಖ್ಸಾನ್ ರೋಸನ್ ತಿಳಿಸಿದರು.

‘‘ಈ ಮಾದರಿಯ ವಿಮಾನಗಳ ಮೇಲೆ ಇಂಡೋನೇಶ್ಯ ಪ್ರಯಾಣಿಕರು ನಂಬಿಕೆ ಕಳೆದುಕೊಂಡಿದ್ದಾರೆ ಹಾಗೂ ಅವುಗಳಲ್ಲಿ ಪ್ರಯಾಣಿಸಲು ಅವರು ಬಯಸುತ್ತಿಲ್ಲ. ಹಾಗಾಗಿ ಇಂಥ ವಿಮಾನಗಳ ಖರೀದಿಯನ್ನು ನಿಲ್ಲಿಸುತ್ತಿದ್ದೇವೆ’’ ಎಂದರು.

2014ರಲ್ಲಿ ನೂತನ ಮಾದರಿಯ ವಿಮಾನವನ್ನು ಬೋಯಿಂಗ್ ಕಂಪೆನಿಯು ಘೋಷಿಸಿದಾಗ, ಇಂಥ 50 ವಿಮಾನಗಳ ಖರೀದಿಗಾಗಿ ಗರುಡ ಕಂಪೆನಿಯು 4.9 ಬಿಲಿಯ ಡಾಲರ್ (ಸುಮಾರು 33,818 ಕೋಟಿ ರೂಪಾಯಿ) ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ ಒಂದು ವಿಮಾನವನ್ನು ಈಗಾಗಲೇ ‘ಗರುಡ’ಕ್ಕೆ ಹಸ್ತಾಂತರಿಸಲಾಗಿದೆ.

ಈಗಾಗಲೇ ಪಡೆದುಕೊಂಡಿರುವ ವಿಮಾನವನ್ನು ಹಿಂದಿರುಗಿಸಬೇಕೇ, ಬೇಡವೇ ಎಂಬ ಬಗ್ಗೆ ಗರುಡವು ಬೋಯಿಂಗ್‌ನೊಂದಿಗೆ ಮಾತುಕತೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News