ಹಫ್ತಾ ನೀಡುವಂತೆ ಉದ್ಯಮಿಗೆ ಬೆದರಿಕೆ ಕರೆ ಪ್ರಕರಣ: ಭೂಗತ ಪಾತಕಿ ಬನ್ನಂಜೆ ರಾಜನ ಐವರು ಸಹಚರರ ಬಂಧನ

Update: 2019-03-22 17:00 GMT
ಧನರಾಜ್ ಪೂಜಾರಿ, ಧನರಾಜ್ ಸಾಲ್ಯಾನ್, ರವಿಚಂದ್ರ ಪೂಜಾರಿ, ಶಶಿ ಪೂಜಾರಿ, ಉಲ್ಲಾಸ ಶೆಣೈ

ಉಡುಪಿ, ಮಾ.22: ಹಫ್ತಾ ಹಣ ನೀಡುವಂತೆ ಉಡುಪಿಯ ಉದ್ಯಮಿ, ಉಪ್ಪೂರು ಕೆ.ಜಿ.ರಸ್ತೆಯ ನಿವಾಸಿ ರತ್ನಾಕರ ಡಿ. ಶೆಟ್ಟಿ(69) ಎಂಬವರಿಗೆ ಬೆದರಿಕೆಯೊಡ್ಡಿದ್ದ ಭೂಗತ ಪಾತಕಿ ಬನ್ನಂಜೆ ರಾಜನ ಐದು ಮಂದಿ ಸಹಚರರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ತಾಲೂಕು ಮುಲ್ಕಿ ಕೋಲ್ನಾಡ್ ಕೆ.ಎಸ್.ರಾವ್ ನಗರ ಮೂಲದ ಪ್ರಸ್ತುತ ಬೆಂಗಳೂರು ಜೆ.ಪಿ.ನಗರದ ನಿವಾಸಿಗಳಾದ ಶಶಿ ಪೂಜಾರಿ ಯಾನೆ ಶಾಡೋ(28) ಮತ್ತು ಆತನ ಅಣ್ಣ ರವಿಚಂದ್ರ ಪೂಜಾರಿ ಯಾನೆ ವಿಕ್ಕಿ ಪೂಜಾರಿ(30), ಮಂಗಳೂರು ಮೂಲದ ಕಟಪಾಡಿ ಫಾರೆಸ್ಟ್ ಗೇಟ್ ಬಳಿ ನಿವಾಸಿ ಧನರಾಜ್ ಪೂಜಾರಿ(26), ಮಲ್ಪೆ ಕೊಳ ನಿವಾಸಿ ಧನರಾಜ್ ಸಾಲ್ಯಾನ್ ಯಾನೆ ಧನು ಕೊಳ(30), ಮಲ್ಪೆ ಸರಕಾರಿ ಪಿ.ಯು. ಕಾಲೇಜು ಬಳಿಯ ನಿವಾಸಿ ಉಲ್ಲಾಸ ಶೆಣೈ(27) ಬಂಧಿತ ಆರೋಪಿಗಳು.

ಮಾ.13ರಂದು ರತ್ನಾಕರ ಡಿ.ಶೆಟ್ಟಿ ಅವರ ಮೊಬೈಲ್‌ಗೆ ಕರೆ ಮಾಡಿದ್ದ ದುಷ್ಕರ್ಮಿಗಳು ಹಫ್ತಾ ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಉಡುಪಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಸಿ.ಕಿರಣ್ ನೇತೃತ್ವದ ತಂಡ ಆರೋಪಿಗಳ ಪತ್ತೆಗೆ ಕಾರ್ಯತಂತ್ರವನ್ನು ರೂಪಿಸಿತು.

ಈ ಸಂಬಂಧ ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸಿ, ಉದ್ಯಮಿಗೆ ಜೀವ ಬೆದರಿಕೆಯೊಡ್ಡಿ ಹಫ್ತಾ ವಸೂಲಿಗೆ ಕರೆ ಮಾಡಿದ ಶಶಿ ಪೂಜಾರಿಯನ್ನು ಪತ್ತೆ ಹಚ್ಚಲು ತಂಡ ಬೆಂಗಳೂರಿಗೆ ಪ್ರಯಾಣ ಬೆಳೆಸಿತು. ಅಲ್ಲಿ ವಿವಿಧ ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ ತಂಡ, ಬ್ರಿಗೇಡ್ ಅಡ್ಡ ರಸ್ತೆಯ ಬಾರೊಂದರ ಬಳಿ ಮಾ.21ರಂದು ರಾತ್ರಿ 10:30ರ ಸುಮಾರಿಗೆ ಶಶಿ ಪೂಜಾರಿ, ರವಿಚಂದ್ರ ಪೂಜಾರಿ ಹಾಗೂ ಧನರಾಜ್ ಪೂಜಾರಿ ವಶಕ್ಕೆ ಪಡೆದುಕೊಳ್ಳಲಾಯಿತು. ಇವರು ನೀಡಿದ ಮಾಹಿತಿಯಂತೆ ಮಾ.22ರಂದು ಬೆಳಿಗೆ 7 ಗಂಟೆಗೆ ಸುಮಾರಿಗೆ ಮಲ್ಪೆಯಲ್ಲಿ ಧನರಾಜ್ ಸಾಲ್ಯಾನ್ ಮತ್ತು ಮಾ.23ರಂದು ಸಂಜೆ ಉಡುಪಿ ಕೋರ್ಟ್ ರಸ್ತೆಯ ಬಳಿ ಉಲ್ಲಾಸ ಶೆಣೈ ಎಂಬವರನ್ನು ಬಂಧಿಸಿ ಮುಂದಿನ ತನಿಖೆಗಾಗಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಡಿಸಿಐಬಿ ಎಎಸ್ಸೈ ರವಿಚಂದ್ರ, ಸಿಬ್ಬಂದಿಗಳಾದ ಸುರೇಶ್, ಸಂತೋಷ ಕುಂದರ್, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪುಂದ, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಪೂಜಾರಿ ಹಾಗೂ ಚಾಲಕ ರಾಘವೇಂದ್ರ ಭಾಗವಹಿಸಿದ್ದಾರೆ.

ಜೈಲಿನಲ್ಲಿದ್ದುಕೊಂಡೆ ಸಹಚರರಿಗೆ ಸೂಚನೆ
ಈ ಪ್ರಕರಣದ ಪ್ರಮುಖ ಆರೋಪಿ ಭೂಗತ ಪಾತಕಿ ಬನ್ನಂಜೆ ರಾಜ ಈಗಾಗಲೇ ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿದ್ದು, ಅಲ್ಲಿಂದಲೇ ತನ್ನ ಸಹಚರರನ್ನು ಛೂಬಿಟ್ಟು ದಂಧೆ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಗಳು ಬನ್ನಂಜೆ ರಾಜನ ಸೂಚನೆಯಂತೆ ತಮ್ಮ ಸ್ವಂತ ಲಾಭಕ್ಕಾಗಿ ಸಂಘಟನೆ ಮಾಡಿಕೊಂಡು ಉಡುಪಿಯ ಪ್ರತಿಷ್ಠಿತ ವ್ಯಕ್ತಿಗಳು, ಬಿಲ್ಡರ್‌ಗಳಿಗೆ, ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಹಫ್ತಾ ಹಣ ನೀಡುವಂತೆ ಬೇಡಿಕೆ ಇಟ್ಟು, ಹಣ ನೀಡದೇ ಇದ್ದಲ್ಲಿ ಜೀವ ಬೆದರಿಕೆ ಹಾಕಿ ಭಯ ಭೀತಿ ಉಂಟು ಮಾಡುತ್ತಿದ್ದರು.

ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ಮಂಗಳೂರು ಉತ್ತರ (ಬಂದರ್), ಪೂರ್ವ(ಕದ್ರಿ), ಬರ್ಕೆ, ಉರ್ವಾ, ಉಳ್ಳಾಲ, ಉಡುಪಿಯ ಮಣಿಪಾಲ, ಮಲ್ಪೆಮೊದಲಾದ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ಬೆದರಿಕೆ ಕರೆ ಬಂದರೆ ದೂರು ನೀಡಿ
ದುಷ್ಕರ್ಮಿಗಳು ದೂರವಾಣಿ ಕರೆ ಮಾಡಿ ಹಫ್ತಾ ಹಣ ನೀಡುವಂತೆ ಜೀವ ಬೆದರಿಕೆಯೊಡ್ಡುತ್ತಿರುವುದು ಕಂಡು ಬಂದರೆ ಕೂಡಲೇ ಹತ್ತಿರ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂ(ದೂರವಾಣಿ ಸಂಖ್ಯೆ: 0820- 2526444) ನ್ನು ಸಂಪಕಿಸರ್ಲು ಪೊಲೀಸ್ ಪ್ರಕಟಣೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News