ಭಾರತದ ಸುಸ್ಥಿರ ಬೆಳವಣಿಗೆಗೆ ಇನ್ನಷ್ಟು ಕ್ರಮ ಅಗತ್ಯ: ಐಎಂಎಫ್

Update: 2019-03-22 17:20 GMT

ಹೊಸದಿಲ್ಲಿ, ಮಾ.22: ಭಾರತವು ಮಹತ್ವದ ಸುಧಾರಣೆಗಳನ್ನು ಜಾರಿಗೊಳಿಸಿದೆ,ಆದರ ಕಳೆದ ಕೆಲವು ವರ್ಷಗಳ ತನ್ನ ಹೆಚ್ಚಿನ ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಲು ಇನ್ನಷ್ಟು ಸುಧಾರಣೆಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯು ಹೇಳಿದೆ.

ಕಳೆದ ಐದು ವರ್ಷಗಳಲ್ಲಿ ಸರಾಸರಿ ಸುಮಾರು ಶೇ.7 ಬೆಳವಣಿಗೆ ದರದೊಂದಿಗೆ ಭಾರತವು ಇತ್ತೀಚಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೃಹತ್ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಹೇಳಿದ ಐಎಂಎಫ್‌ನ ಸಂವಹನ ನಿರ್ದೇಶಕ ಗೆರಿ ರೈಸ್ ಅವರು,ಈ ಹೆಚ್ಚಿನ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಬೃಹತ್ ಜನಸಂಖ್ಯೆಯ ಲಾಭವನ್ನು ಪಡೆದುಕೊಳ್ಳುವ ಅವಕಾಶದ ಬಳಕೆ ಸೇರಿದಂತೆ ಇನ್ನಷ್ಟು ಸುಧಾರಣೆಗಳು ಅಗತ್ಯವಾಗಿವೆ ಎಂದರು.

ಬ್ಯಾಂಕುಗಳ ಮತ್ತು ಕಾರ್ಪೊರೇಟ್ ಆಯವ್ಯಯ ಪಟ್ಟಿಗಳ ತ್ವರಿತ ಶುದ್ಧೀಕರಣ,ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ವಿತ್ತೀಯ ಏಕೀಕರಣ,ಮಾರುಕಟ್ಟೆ,ಕಾರ್ಮಿಕ ಕ್ಷೇತ್ರ,ಭೂಸುಧಾರಣೆಗಳಲ್ಲಿ ರಚನಾತ್ಮಕ ಸುಧಾರಣೆ ಇತ್ಯಾದಿಗಳು ಭಾರತದ ನೀತಿ ಆದ್ಯತೆಗಳಲ್ಲಿ ಸೇರಿವೆ ಎಂದರು.

 ಐಎಂಎಫ್ ಮುಂದಿನ ತಿಂಗಳು ಬಿಡುಗಡೆಗೊಳಿಸಲಿರುವ ವಿಶ್ವ ಆರ್ಥಿಕತೆ ಮುನ್ನೋಟವು ಭಾರತೀಯ ಆರ್ಥಿಕತೆಯ ಬಗ್ಗೆ ಇನ್ನಷ್ಟು ವಿವರಗಳನ್ನು ಒಳಗೊಂಡಿರಲಿದೆ. ಅದು ಭಾರತೀಯ ಸಂಜಾತೆ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರು ಜನವರಿಯಲ್ಲಿ ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಂಸ್ಥೆಯ ಇಂತಹ ಮೊದಲ ವರದಿಯಾಗಲಿದೆ ಎಂದು ರೈಸ್ ತಿಳಿಸಿದರು.

ಭಾರತದ ಪ್ರಗತಿ ಕುರಿತು ಫಿಚ್ ಅಂದಾಜು ಕಡಿತ

ತನ್ಮಧ್ಯೆ ಕ್ರೆಡಿಟ್ ರೇಟಿಂಗ್ಸ್ ಸಂಸ್ಥೆ ಫಿಚ್ ರೇಟಿಂಗ್ 2019-20ನೇ ಸಾಲಿಗೆ ಭಾರತದ ಆರ್ಥಿಕ ಪ್ರಗತಿ ಕುರಿತು ತನ್ನ ಅಂದಾಜನ್ನು ಹಿಂದಿನ ಶೇ.7ರಿಂದ ಶೇ.6.8ಕ್ಕೆ ತಗ್ಗಿಸಿದೆ. ಆರ್ಥಿಕ ಬೆಳವಣಿಗೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಗತಿ ಇದಕ್ಕೆ ಕಾರಣವೆಂದು ಅದು ತಿಳಿಸಿದೆ. 2020-21ರಲ್ಲಿ ಭಾರತದ ಆರ್ಥಿಕ ಪ್ರಗತಿ ದರವು ಶೇ.7.1ಕ್ಕೆ ಹೆಚ್ಚಲಿದೆ ಎಂದು ಅದು ಹೇಳಿದೆ.

ಕಳೆದ ಡಿಸೆಂಬರ್‌ನಲ್ಲಿ ಫಿಚ್ ಭಾರತದ ಆರ್ಥಿಕ ಪ್ರಗತಿ ಕುರಿತು ತನ್ನ ಅಂದಾಜನ್ನು ಮೊದಲಿನ ಶೇ.7.3ರಿಂದಶೇ.7ಕ್ಕೆ ಪರಿಷ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News