ಉಡುಪಿ ಆರ್‌ಟಿಓ ಅಕ್ರಮ ಆಸ್ತಿಗಳಿಕೆ ಪ್ರಕರಣ: ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿಗಳ ದಾಖಲೆ ಪತ್ತೆ

Update: 2019-03-22 17:21 GMT

ಉಡುಪಿ, ಮಾ.22: ಉಡುಪಿ ಆರ್‌ಟಿಓ ಆರ್.ಎಂ.ವರ್ಣೇಕರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಸಿರುವ ಭ್ರಷ್ಟಾಚಾರ ನಿಗ್ರಹ ದಳ, ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿಗಳ ದಾಖಲೆಗಳನ್ನು ಪತ್ತೆಹಚ್ಚಿದೆ.

ವರ್ಣೇಕರ್ ಅಕ್ರಮ ಆಸ್ತಿಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಮಾ.20ರಂದು ಪ್ರಕರಣ ದಾಖಲಿಸಿಕೊಂಡ ಎಸಿಬಿ ಪೊಲೀಸರು, ಅವರಿಗೆ ಸಂಬಂಧಿಸಿದ ಕುಟುಂಬದವರು ವಾಸವಿರುವ ಮಂಗ ಳೂರಿನ ಮನೆ, ಕಚೇರಿ, ಕಾರವಾರದಲ್ಲಿರುವ ಮೂಲ ಮನೆಗಳ ಮೇಲೆ ದಾಳಿ ನಡೆಸಿದ್ದರು.

ಇನ್ನೂ ಶೋಧನಾ ಕಾರ್ಯ ಮುಂದುವರಿದಿದ್ದು, ಈವರೆಗೆ ಮಂಗಳೂರಿನಲ್ಲಿ ಒಂದು ಮನೆ, ವಿವಿಧ ಸರ್ವೆ ನಂಬರಗಳಲ್ಲಿ 9 ನಿವೇಶನ(ಒಟ್ಟು 1 ಎಕರೆ 95 ಸೆಂಟ್ಸ್ ಜಮೀನು), ಪುತ್ತೂರಿನಲ್ಲಿ ಒಂದು ಮನೆ, ಎರಡು ನಿವೇಶನ, ಬೆಂಗಳೂರಿನಲ್ಲಿ ಮೂರು ನಿವೇಶನ, ಮೈಸೂರಿನಲ್ಲಿ ಒಂದು ಮನೆ, ಒಂದು ನಿವೇಶನ ಹಾಗೂ 26 ಗುಂಟೆ ಜಮೀನು, ಬೆಳಗಾವಿಯಲ್ಲಿ ಎರಡು ಫ್ಲಾಟ್ ಹಾಗೂ 8 ಗುಂಟೆ ಜಮೀನು, ಚಿನ್ನ 30 ಗ್ರಾಂ, ಬೆಳ್ಳಿ 1 ಕೆಜಿ, 2 ಕಾರು, 3 ದ್ವಿಚಕ್ರ ವಾಹನ, 50 ಲಕ್ಷ ರೂ. ಠೇವಣಿಗಳು ಮತ್ತು 22.80 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ತನಿಖೆಯಿಂದ ಪತ್ತೆಯಾಗಿವೆ. ಆರೋಪಿ ಹೊಂದಿರುವ ಎರಡು ಬ್ಯಾಂಕ್ ಲಾಕರ್‌ಗಳು, ಆಸ್ತಿಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂದಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಏರ್ ಶೋ ಸಂದರ್ಭದಲ್ಲಿ ಬೆಂಕಿ ಅವಘಡದಿಂದ ಸುಟ್ಟು ಹೋದ ಕಾರೊಂದರ ರಸ್ತೆ ತೆರಿಗೆ ಸಂಬಂಧ ಮಾ.16ರಂದು ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಆರ್‌ಟಿಓ ವರ್ಣೇಕರ್ ಹಾಗೂ ಮಧ್ಯವರ್ತಿ ಮುನಾಫ್ ಎಂಬಾತನನ್ನು ಎಸಿಬಿ ಪೊಲೀಸರು ಬಂಧಿಸಿ, ಲಂಚದ ಹಣ 4ಸಾವಿರ ರೂ. ಮತ್ತು ಕಚೇರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 30,670ರೂ.ವನ್ನು ವಶಪಡಿಸಿಕೊಂಡಿದ್ದರು. ಅವರ ಮಂಗಳೂರಿನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 70,18,237 ರೂ.ನಗದು ವಶಪಡಿಸಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News