ಮೂಡುಬಿದಿರೆ: ಲಾರಿ ಮಾಲಕ-ಚಾಲಕರ ಸಂಘದಿಂದ ಪ್ರತಿಭಟನೆ

Update: 2019-03-22 18:00 GMT

ಮೂಡುಬಿದಿರೆ: ಕಂದಾಯ ಇಲಾಖೆ ಪೊಲೀಸರೊಂದಿಗೆ ಸೇರಿಕೊಂಡು ಲಾರಿಗಳಿಗೆ ವಾಹನ ಪರವಾನಿಗೆ ಸಹಿತ ಎಲ್ಲಾ ಅಗತ್ಯ ದಾಖಲೆಗಳು ಹೊಂದಿದ್ದರೂ, ಕೆಂಪುಕಲ್ಲು ಸಾಗಾಟದ ನೆಪವೊಡ್ಡಿ ರಸ್ತೆ ಮಧ್ಯೆ ತಡೆದು ಕೇಸು ದಾಖಲಿಸಿ ತೊಂದರೆ ಕೊಡುತ್ತಿದ್ದು, ವಿನಾಕಾರಣ ತೊಂದರೆ ನೀಡಬಾರದು ಎಂದು ಆಗ್ರಹಿಸಿ ಲಾರಿ ಚಾಲಕ ಮಾಲಕ ಮತ್ತು ದಿನಗೂಲಿ ಕಾರ್ಮಿಕರ ಒಕ್ಕೂಟ ಸಂಘ ಮೂಡುಬಿದಿರೆ ವಲಯ ತಹಶೀಲ್ದಾರ್ ಕಛೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದೆ.

ಕೆಂಪುಕಲ್ಲು ಸಾಗಾಟಕ್ಕೆ ಇಲಾಖೆಯು ಸರಿಯಾದ ರೀತಿಯಲ್ಲಿ ಪರವಾಣಿಗೆಯನ್ನು ನೀಡುತ್ತಿಲ್ಲ. ಈ ಭಾಗದಲ್ಲಿ ಸುಮಾರು 150 ಕ್ಕೂ ಹೆಚ್ಚು ಲಾರಿಗಳಿದ್ದು ಇದರ ಕಾರ್ಮಿಕರು ಮತ್ತು ಮಾಲಕರು ಜೀವನೋಪಾಯಕ್ಕೆ ಕೆಂಪುಕಲ್ಲು ಸಾಗಾಟವನ್ನೇ ಅವಲಂಭಿಸಬೇಕಾಗಿದೆ. ಸಾರಿಗೆ ಇಲಾಖೆಯಿಂದ ಎಲ್ಲಾ ರೀತಿಯ ಅಗತ್ಯ ದಾಖಲೆಗಳನ್ನು ಲಾರಿ ಮಾಲಕರು ಹೊಂದಿದ್ದು ರಸ್ತೆ ನಿಯಮಗಳನ್ನು ಎಲ್ಲರೂ ಪಾಲಿಸುತ್ತಿದ್ದಾರೆ. ಈಗಿದ್ದರೂ ಕಂದಾಯ ಅಧಿಕಾರಿಗಳು ಕೆಂಪುಕಲ್ಲಿನ ಹೆಸರಿನಲ್ಲಿ ಲಾರಿಗಳನ್ನು ತಡೆದು ಕೇಸು ದಾಖಲಿಸುತ್ತಿರುವುದು ಲಾರಿ ಕಾರ್ಮಿಕರ ಮತ್ತು ಮಾಲಕರ ಜೀವನ ದುಸ್ತರವಾಗಿದೆ. ಸಾಲಮಾಡಿ ಲಾರಿ ಮಾಲಕರು ಲಾರಿ ಖರೀದಿಸಿದ್ದು, ಪೋಲಿಸರು ಲಾರಿಗಳನ್ನು ವಶಕ್ಕೆ ಪಡೆಯುತ್ತಿರುವುದರಿಂದ ಸಾಲದ ಕಂತು ಕಟ್ಟಲೂ ಸಾದ್ಯವಾಗುತ್ತಿಲ್ಲ. ಕಡಿಮೆ ವಿಧ್ಯೆ ಕಲಿತ ಕಾರ್ಮಿಕರೂ ಕೆಲಸವಿಲ್ಲದೆ ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಮರಳು ಉದ್ಯಮವೂ ಪರವಾನಿಗೆ ಇಲ್ಲದೆ ಸಂಪೂರ್ಣವಾಗಿ ನಿಂತು ಹೋಗಿದೆ. ಈಗಿರುವಾಗ ಬಡ ಲಾರಿ ಕಾರ್ಮಿಕರ ಮೇಲೆ ಇಲಾಖೆ ವಿನಾಕಾರಣ ಗಾಯದ ಮೇಲೆ ಬರೆ ಎಳೆಯುವುದು ಸರಿಯಲ್ಲ. ಕೂಡಲೇ ಕಲ್ಲು ಸಾಗಾಟದ ಪರವಾನಿಗೆ ನೀಡಬೇಕೆಂದು ಸಂಘದ ಮುಖಂಡ ರಾಜೇಶ್ ಕೋಟ್ಯಾನ್ ಒತ್ತಾಯಿಸಿದರು.

ಪ್ರತಿಭಟನಾಕಾರರ ಬಳಿ ಬಂದು ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಸುದರ್ಶನ್, ನಿಮಗೇ ಎಲ್ಲವೂ ಗೊತ್ತಿದೆ. ನಿಮ್ಮ ಮನವಿಯನ್ನು ಪರಿಶೀಲಿಸುತ್ತೇನೆ ಎಂದಾಗ  ಪರವಾನಿಗೆ ನೀಡುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪ್ರತಿಭಟನಾಕಾರರು, ಸಮಸ್ಯೆಗೆ ಶೀಘ್ರ ಪರಿಹಾರ ದೊರಕದಿದ್ದಲ್ಲಿ ಉಗ್ರ ಪ್ರತಿಭಟನೆಗೆ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News