ಪುತ್ತೂರು: ಪತ್ನಿಗೆ ಚೂರಿ ಇರಿತಪ್ರಕರಣ; ಆರೋಪಿ ಪತಿಗೆ ಸಜೆ

Update: 2019-03-22 18:03 GMT

ಪುತ್ತೂರು: ಪತ್ನಿಗೆ ಚೂರಿಯಿಂದ ಇರಿದು ಗಂಭೀರ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿದ್ದ ಪತಿಯನ್ನು ಅಪರಾಧಿ ಎಂದು ಪರಿಗಣಿಸಿರುವ ಪುತ್ತೂರಿನ 5ನೇ ಹೆಚ್ಚುವರಿ ಸತ್ರ ಜಿಲ್ಲಾ ನ್ಯಾಯಾಲಯ ಆತನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ರೂ.19 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಬಿಜಾಪುರ ಜಿಲ್ಲೆಯ ರಾಮನಗರ ನಿವಾಸಿ ಮೋಹನ್ ಅವರ ಪುತ್ರ ಪ್ರಕಾಶ್ ವಲ್ಲಾಪುರ (36ವ) ಶಿಕ್ಷೆಗೊಳಗಾದ ಅಪರಾಧಿ. 2014ರ ಮಾ.19ರಂದು ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಅರೋಪಿ ಪ್ರಕಾಶ್ ವಲ್ಲಾಪುರ ಬಸ್‍ನಲ್ಲಿ ನಿರ್ವಾಹಕಿಯಾಗಿ ಕರ್ತವ್ಯದಲ್ಲಿದ್ದ ತನ್ನ ಪತ್ನಿ ಇಂದಿರಾ ರ್ಯಾಗಿ ಅವರಿಗೆ ಚೂರಿಯಿಂದ ತಿವಿದು ಗಂಭೀರ ಹಲ್ಲೆ ನಡೆಸಿರುವಾಗಿ ಆರೋಪಿಸಲಾಗಿತ್ತು. ಆರೋಪಿ ಪ್ರಕಾಶ್‍ನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದರು.  ಆಗಿನ ಇನ್ಸ್ ಪೆಕ್ಟರ್ ಮಹದೇವ ಶೆಟ್ಟಿ ಅವರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಸತ್ರ ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶ ಶಿವಣ್ಣ ಅವರು ಅಪರಾಧಿಗೆ ಸೆಕ್ಷನ್ 498(ಎ)ಗೆ ಸಂಬಂಧಿಸಿ 1 ವರ್ಷ ಜೈಲು ಶಿಕ್ಷೆ ಮತ್ತು ರೂ. 4ಸಾವಿರ ದಂಡ, ಸೆಕ್ಷನ್ 337ಕ್ಕೆ ಸಂಬಂಧಿಸಿ 7 ವರ್ಷ ಜೈಲು ಶಿಕ್ಷೆ ಮತ್ತು ರೂ. 5ಸಾವಿರ ದಂಡ, ಸೆಕ್ಷನ್ 307ಗೆ ಸಂಬಂಧಿಸಿ 7 ವರ್ಷ ಜೈಲು ಶಿಕ್ಷೆ ಮತ್ತು ರೂ. 10ಸಾವಿರ ದಂಡ ವಿಧಿಸಿದ್ದಾರೆ. ಪ್ರಕರಣದ ವಿಚಾರಣೆಯ ಹಂತದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಆಗಿನ ಸರ್ಕಾರಿ ಅಭಿಯೋಜಕ ಉದಯ ಕುಮಾರ್ ಅವರು ವಾದ ಮಂಡಿಸಿದ್ದರು. ಇದೀಗ ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ಅವರು ವಾದಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News