×
Ad

‘ಪ್ರಮೋದ್ ಎಂಬ ಪ್ರೊಡಕ್ಟ್ ಬಗ್ಗೆ ಮಾರ್ಕೆಟಿಂಗ್ ಮಾಡಿ’: ಕಾರ್ಯಕರ್ತರಿಗೆ ಮೈತ್ರಿ ಅಭ್ಯರ್ಥಿ ಕರೆ

Update: 2019-03-24 16:48 IST

ಉಡುಪಿ, ಮಾ.24: ‘ಈ ಬಾರಿಯ ಚುನಾವಣೆಯಲ್ಲಿ ನಿಮ್ಮ ಮುಂದೆ ಎರಡು ರೀತಿಯ ಪ್ರೊಡಕ್ಟ್‌ಗಳಿವೆ. ಒಂದು ಪ್ರಮೋದ್ ಹಾಗೂ ಇನ್ನೊಂದು ಶೋಭಾ ಕರಂದ್ಲಾಜೆ. ಅದರಲ್ಲಿ ನೀವು ಪ್ರಮೋದ್ ಎಂಬ ಪ್ರೊಡಕ್ಟ್ ಬಗ್ಗೆ ಮಾರ್ಕೆಟಿಂಗ್ ಮಾಡುವ ಕೆಲಸವನ್ನು ಮಾಡಬೇಕು’ ಹೀಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ರವಿವಾರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕರೆ ನೀಡಿದರು.

ಕಾರ್ಯಕರ್ತರು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಗೆಲ್ಲಿಸಲೂ ಆಗುತ್ತದೆ ಮತ್ತು ಸೋಲಿಸಲೂ ಆಗುತ್ತದೆ. ಅದರ ಅನುಭವ ನನಗೆ ಆಗಿದೆ. ಅದರಿಂದ ಪಾಠ ಕೂಡ ಕಲಿತಿದ್ದೇನೆ. ಈ ಹಿಂದೆ ಶಾಸಕನಾಗಿದ್ದಾಗ ಕೆಲಸದ ಒತ್ತಡದಿಂದ ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ನೋವಿದೆ. ಕೆಟ್ಟ ಮೇಲೆ ಬುದ್ದಿ ಎಂಬ ಗಾದೆ ಮಾತು ನನಗೆ ಅನುಭವಕ್ಕೆ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿಕೊಟ್ಟರೆ ಮುಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸೇವಕನಾಗಿ ದುಡಿಯುತ್ತೇನೆ ಎಂದರು.

ಈ ಕ್ಷೇತ್ರದಲ್ಲಿ ಒಂದು ವೇಳೆ ನಾನು ಸ್ಪರ್ಧಿಸದಿದ್ದರೆ ಜೆಡಿಎಸ್‌ನ ಭೋಜೆ ಗೌಡ ಚುನಾವಣೆಗೆ ನಿಲ್ಲುತ್ತಿದ್ದರು. ಆಗ ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷ, ಕಾರ್ಯಕರ್ತರು ಹಾಗೂ ಮತದಾರರ ಪರಿಸ್ಥಿತಿ ಏನಾಗಬಹುದಿತ್ತು ಎಂಬು ದನ್ನು ಯೋಚನೆ ಮಾಡಿ, ಭವಿಷ್ಯದ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಸ್ಪರ್ಧೆಗೆ ಇಳಿದಿದ್ದೇನೆ. ನಾನು ಕಾಂಗ್ರೆಸ್ ಜೆಡಿಎಸ್‌ನ ಜಂಟಿ ಅಭ್ಯರ್ಥಿಯಾಗಿ ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಈ ಬಾರಿ ಕೆಲಸ ಮಾಡುವ ಎಂಪಿ ಬೇಕಾ ಅಥವಾ ಕೆಲಸ ಮಾಡದ ಎಂಪಿ ಬೇಕಾ ಎಂಬುದು ಮತದಾರರ ಮುಂದೆ ಇರುವ ಪ್ರಶ್ನೆ. ಕಳೆದ ಐದು ವರ್ಷಗಳಿಂದ ಕ್ಷೇತ್ರದ ಬಗ್ಗೆ ಗಮನ ಕೊಡದ ಶೋಭಾ ಈಗ ಚುನಾವಣೆ ಸಂದರ್ಭ ಪಟ್ಟಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಏನು ಕೆಲಸ ಮಾಡದ ಶೋಭಾ ಕರಂದ್ಲಾಜೆಯ ಕಾರ್ಯಗಳ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಮೋದಿ ಸರಕಾರವನ್ನು ಕಿತ್ತೋಗೆಯುವ ಹೋರಾಟ ನಮ್ಮ ಮುಂದೆ ಇದೆ. ಮೋದಿ ಸರಕಾರದಿಂದ ದೇಶದ ಆರ್ಥಿಕತೆಗೆ ದೊಡ್ಡ ಗಂಡಾಂತರ ಎದುರಾಗಿದೆ. ಇದರಿಂದ ನಾನು ಸೇರಿದಂತೆ ಎಲ್ಲರೂ ಕಷ್ಟದಲ್ಲಿದ್ದಾರೆ. ಇವರ ಸರಕಾರದಲ್ಲಿ ಅಮಿತ್ ಶಾ ಮಗ ಹಾಗೂ ಅಂಬಾನಿ ಬಿಟ್ಟರೆ ಬೇರೆ ಯಾರ ಆದಾಯ ಕೂಡ ಹೆಚ್ಚಾಗಿಲ್ಲ ಎಂದು ಅವರು ಟೀಕಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ.ಬಾವಾ, ಎಂ.ಎ.ಗಫೂರ್, ಮಾಜಿ ಶಾಸಕ ಯು.ಆರ್.ಸಭಾಪತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪಕ್ಷದ ಮುಖಂಡರಾದ ಭರತ್ ಮುಂದೋಡಿ, ವರೋನಿಕಾ ಕರ್ನೆಲಿಯೋ, ಮುರಳಿ ಶೆಟ್ಟಿ, ವಿಶ್ವಾಸ್ ಅಮೀನ್, ಸರಳ ಕಾಂಚನ್, ನಿತ್ಯಾ ನಂದ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಸತೀಶ್ ಅಮೀನ್ ಪಡುಕೆರೆ, ಯತೀಶ್ ಕರ್ಕೇರ, ಚಂದ್ರಿಕಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News