ಮಾ.25: ಕಾಂಗ್ರೆಸ್, ಬಿಜೆಪಿ, ಎಸ್‌ಡಿಪಿಐ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಮಂಗಳೂರು, ಮಾ.24: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕಾಂಗ್ರೆಸ್, ಬಿಜೆಪಿ, ಎಸ್‌ಡಿಪಿಐ ಪಕ್ಷಗಳ ಅಭ್ಯರ್ಥಿಗಳು ಮಾ.25ರಂದು ಚುನಾವಣಾಧಿಕಾರಿಯೂ ಆದ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಬೆಳಗ್ಗೆ 9 ಗಂಟೆಗೆ ಬಂಟ್ಸ್‌ಹಾಸ್ಟೆಲ್ ಬಳಿಯ ಚುನಾವಣಾ ಕಾರ್ಯಾಲಯದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಬೆಳಗ್ಗೆ 10:30ಕ್ಕೆ ನಗರದ ಪುರಭವನದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಸಮಾವೇಶ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.
ಎಸ್‌ಡಿಪಿಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಪೂರ್ವಾಹ್ನ 11:30ಕ್ಕೆ ಹಂಪನಕಟ್ಟೆ ಸರ್ಕಲ್ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ರ್ಯಾಲಿ ನಡೆಸಿದ ಬಳಿಕ ನಾಮಪತ್ರ ಸಲ್ಲಿಸಲಿದ್ದಾರೆ.
ಈಗಾಗಲೆ ಲೋಕತಾಂತ್ರಿಕ ಜನತಾ ದಳ ಪಕ್ಷದ ಅಭ್ಯರ್ಥಿಯಾಗಿ ಸುಪ್ರೀತ್ ಪೂಜಾರಿ ಮತ್ತು ಉತ್ತಮ ಪ್ರಜಾಕೀಯ ಪಕ್ಷದಿಂದ ವಿಜಯಶ್ರೀನಿವಾಸ ಸಿ. ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ದೀಪಕ್ ರಾಜೇಶ್ ಕುವೆಲ್ಲೋ ನಾಮಪತ್ರ ಸಲ್ಲಿಸಿದ್ದಾರೆ. ಮಾ.26ರ ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.