ಸಮಸ್ಯೆಗಳಿದ್ದರೆ ಮಾಸಿಕ ಕುಂದುಕೊರತೆ ಸಭೆಯವರೆಗೆ ಕಾಯಬೇಡಿ: ಸಂದೀಪ್ ಪಾಟೀಲ್
ಮಂಗಳೂರು, ಮಾ.24: ಯಾವುದೇ ಸಮಸ್ಯೆಗಳಿದ್ದರೆ, ಅಹವಾಲು ಹೇಳಿಕೊಳ್ಳಲಿದ್ದರೆ ಮಾಸಿಕ ಕುಂದು ಕೊರತೆ ಸಭೆಯ ತನಕ ಕಾಯದೆ ನೇರ ಕಚೇರಿಗೆ ಬಂದು ಮುಖತಃ ಭೇಟಿಯಾಗಿ ಸಮಸ್ಯೆಗಳನ್ನು ತನ್ನ ಗಮನಕ್ಕೆ ತರಬಹುದು ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ದಲಿತರಿಗೆ ಸೂಚಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರವಿವಾರ ನಡೆದ ಮಾಸಿಕ ದಲಿತ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಣಂಬೂರು ನಿವಾಸಿ ಶಕುಂತಳಾ ಎಂಬವರು ಜಾತಿ ನಿಂದನೆಗೆ ಸಂಬಂಧಿಸಿ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಇನ್ನೂ ಎಫ್‌ಐಆರ್ ದಾಖಲಿಸಿಲ್ಲ ಎಂದು ದಲಿತ ಮುಖಂಡ ರಮೇಶ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂದೀಪ್ ಪಾಟೀಲ್, ತಕ್ಷಣ ದೂರು ದಾಖಲಿಸಿ ತನಿಖೆ ನಡೆಸುವಂತೆ ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ ಗೌಡರಿಗೆ ಸೂಚಿಸಿದರಲ್ಲದೆ, ತನ್ನ ಬಳಿಯೂ ನೇರ ಬಂದು ದೂರು ನೀಡಬಹುದು ಎಂದರು.
ಪಣಂಬೂರು ಪೊಲೀಸ್ ಠಾಣೆಯ ಎಎಸ್ಸೈ ಜತೆ ಮಾತನಾಡುತ್ತಿದ್ದಾಗ ಓರ್ವ ಕಾನ್‌ಸ್ಟೇಬಲ್ ಏಕವಚನದಲ್ಲಿ ಮಾತನಾಡಿ ಠಾಣೆಯಿಂದ ಹೊರಹೋಗು ವಂತೆ ಹೇಳಿ ಅವಮಾನ ಮಾಡಿದ್ದಾರೆ ಎಂದು ದಲಿತ ಮುಖಂಡ ಅಶೋಕ್ ಕೊಂಚಾಡಿ ದೂರಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಮಹಾನಗರಪಾಲಿಕೆಯ ದಲಿತರ ಮೀಸಲು ನಿಧಿಯ ಅನುದಾನದಲ್ಲಿ ದಲಿತರು ವಾಸವಿಲ್ಲದ ರಸ್ತೆಗೆ ಕಾಂಕ್ರಿಟೀಕರಣ ಮಾಡಿ ಹಣ ದುರುಪಯೋಗ ಮಾಡಿ ದ್ದಾರೆ. ಜಿಲ್ಲಾಧಿಕಾರಿಗೆ ದೂರು ನೀಡಿದ ಬಳಿಕ ಅವರ ಸೂಚನೆ ಮೇರೆಗೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದಲೂ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಎಸ್.ಪಿ.ಆನಂದ ಒತ್ತಾಯಿಸಿದರು.
ನಗರದಲ್ಲಿ ಬೆಳಗ್ಗೆ 6 ಗಂಟೆಯ ವೇಳೆಗೆ ಬಾರ್‌ಗಳು, ವೈನ್‌ಶಾಪ್‌ಗಳು ತೆರೆದುಕೊಳ್ಳುತ್ತಿವೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜಪ್ಪಿನಮೊಗರು ಬಳಿ ರಾಷ್ಟ್ರೀಯ ಹೆದ್ದಾರಿ ದಾಟಲು ಮಕ್ಕಳು ಮತ್ತು ವೃದ್ಧರಿಗೆ ಕಷ್ಟವಾಗುತ್ತಿದೆ. ಅಲ್ಲಿಗೆ ಸಿಬ್ಬಂದಿ ನೇಮಕ ಮಾಡಿದ್ದರೂ ಅವರು ಸ್ಥಳದಲ್ಲಿ ಇರುವುದಿಲ್ಲ.
ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಶಿಕ್ಷೆಯಾಗಲು ದೂರುದಾರರಿಗೆ ಹಾಗೂ ಸಾಕ್ಷಿದಾರರಿಗೆ ಠಾಣೆಗಳಲ್ಲಿ ಸರಿಯಾದ ಮಾರ್ಗದರ್ಶನ ನೀಡಬೇಕು. ದಲಿತ ಪದವೀಧರರಿಗೆ ಸ್ವ ಉದ್ಯೋಗ ಕೈಗೊಳ್ಳಲು ಅಂಬೇಡ್ಕರ್ ನಿಗಮದಿಂದ ಸಾಕಷ್ಟು ಅವಕಾಶವಿದೆ. ಈ ಬಗ್ಗೆ ಮಾಹಿತಿ ನೀಡುವ ಕೆಲಸ ಆಗಬೇಕು ಎಂದು ಎಸ್.ಪಿ.ಆನಂದ ಹೇಳಿದರು. ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್ ಉಪಸ್ಥಿತರಿದ್ದರು.