ಕ್ಲಪ್ತ ಸಮಯದಲ್ಲಿ ರೋಗಿಗಳಿಗೆ ಸೇವೆ ದೊರಕುವಂತಾಗಬೇಕು: ಡಾ.ಗಂಗಾಧರ್
ಕೊಣಾಜೆ: ರೋಗಿಗಳಿಗೆ ಸಹಾಯಕವಾಗುವ ರೀತಿಯಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ತೆರೆಯಲಾದ ನೂತನ ಚಿಕಿತ್ಸಾ ಘಟಕದ ಮೂಲಕ ಕ್ಲಪ್ತ ಸಮಯದಲ್ಲಿ ರೋಗಿಗಳಿಗೆ ಸೇವೆ ದೊರಕುವಂತಾಗಲಿ. ನಿಟ್ಟೆ ವಿಶ್ವವಿದ್ಯಾಲಯದ ಈ ಸೇವೆ ಮನಮುಟ್ಟುವ ಕಾರ್ಯವಾಗಿದ್ದು ಆ ಮೂಲಕ ಪದವೀಧರರಿಗೆ ಕೌಶಲ್ಯ ವೃದ್ಧಿಗೆ ಅವಕಾಶ ಕೊಟ್ಟಂತಾಗಿದೆ ಎಂದು ಬೆಂಗಳೂರಿನ ನಿಮ್ಹಾನ್ಸ್‍ನ ನಿರ್ದೇಶಕ, ಇಂಡಿಯನ್ ಮೆಡಿಕಲ್ ಕೌನ್ಸಿಲ್ ಬೋರ್ಡ್ ಆಫ್ ಗವರ್ನರ್ಸ್ ಸದಸ್ಯ ಡಾ. ಗಂಗಾಧರ್ ಹೇಳಿದರು.
ದೇರಳಕಟ್ಟೆ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಅಧೀನದ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾದ ಎನ್‍ಸಿಐಯು, ಪಿಐಸಿಯು, ಸುಟ್ಟ ಗಾಯ ಚಿಕಿತ್ಸಾ ಘಟಕ ಹಾಗೂ ಡಾ. ಶಾಂತಾರಾಮ ಶೆಟ್ಟಿ ಟಿಶ್ಯೂ ಬ್ಯಾಂಕ್ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯರ ಸೇವೆ ಸಾಕಷ್ಟು ಲಭ್ಯವಿದ್ದರೂ ಸಾಮಾನ್ಯ ಕಾಯಿಲೆ, ಸಾಮಾನ್ಯ ಜನರ ರೋಗಕ್ಕೆ ಚಿಕಿತ್ಸೆ ಕೊಡುವ ವೈದ್ಯರ ಸಂಖ್ಯೆ ಕಡಿಮೆ ಇದ್ದು ಆ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂದು ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಹೇಳಿದರು.
ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಮೂಲ ಸಮಸ್ಯೆಗಳಿದ್ದು, ವೈದ್ಯಕೀಯ ಬೋರ್ಡ್ ಅದನ್ನು ಸರಿಪಡಿಸುವ ಅಗತ್ಯತೆ ಇದೆ. ಗ್ರಾಮೀಣ ಭಾಗದ ಸಾಮಾನ್ಯ ಜನತೆಗೆ ಇನ್ನೂ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ಲಭ್ಯವಾಗದಿರುವುದು ದುರದೃಷ್ಟಕರ. ಪದವೀಧರರಾದರೆ ಸಾಲದು. ಸ್ನಾತಕೋತ್ತರ ಪದವಿ ಪಡೆದ ವೈದ್ಯರು ಅವರು ಕಲಿತ ಕ್ಷೇತ್ರದಲ್ಲಿ ಕೌಶಲ್ಯ ವೃದ್ಧಿಸಿಕೊಂಡು ತಜ್ಞರಾಗಿ ಹೊರಬರಬೇಕು. ಗುಣಮಟ್ಟದ ಶಿಕ್ಷಣ ಪಡೆದ ಬಳಿಕ ಕೌಶಲ್ಯ ವೃದ್ಧಿಸಿಕೊಳ್ಳುವುದು ಮುಖ್ಯ. ವೃತ್ತಿಜೀವನದಲ್ಲಿ ಗ್ರಾಮೀಣ ಭಾಗದಲಿಯೂ ಸೇವೆ ಸಲ್ಲಿಸುವಂತಗಬೇಕು. ಆ ನಿಟ್ಟಿನಲ್ಲಿ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ ವತಿಯಿಂದ ಗ್ರಾಮೀಣ ಭಾಗದಲ್ಲಿ ರೋಗಿಗಳಿಗೆ ಉಚಿತ ಸೇವೆ ಕೊಡುತ್ತಿದ್ದೇವೆ ಎಂದರು.
ನಿಟ್ಟೆ ಪರಿಗಣಿಸಲ್ಪಟ್ಟ ವಿವಿ ಸಹ ಕುಲಾಧಿಪತಿ ಪ್ರೊ.ಡಾ. ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ ವೈದ್ಯರು ರೋಗಿಗೆ ಎಲ್ಲ ಬಗೆಯಲ್ಲೂ ಸಮರ್ಪಕವಾಗಿ ಚಿಕಿತ್ಸೆ ನೀಡುವ ಸಲುವಾಗಿಯೇ ವಿಶೇಷವಾದ ಸೌಲಭ್ಯಗಳನ್ನು ಒದಗಿಸಿದಾಗ ನೇರವಾಗಿ ರೋಗಿಯ ಹೃದಯ ಮುಟ್ಟುವ ಕೆಲಸ ಮಾಡುತ್ತದೆ ಎಂದರು.
ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಇಪ್ಪತ್ತು ವರ್ಷಗಳ ವೈದ್ಯಕೀಯ ಸೇವೆ ಹಾಗೂ ಹತ್ತು ವರ್ಷಗಳ ವಿವಿ ಕಾರ್ಯ ನಿರ್ವಹಣೆಯಲ್ಲಿ ಮಹತ್ತರವಾದುದನ್ನೇ ಸಾಧಿಸಿದೆ. ಮುಮದಿನ ಮೂರು ವರ್ಷಗಳಲ್ಲಿ ಎನ್‍ಐಸಿಯು, ಪಿಐಸಿಯು, ಸುಟ್ಟ ಗಾಯ ಚಿಕಿತ್ಸಾ ಘಟಕ, ಟಿಶ್ಯೂ ಬ್ಯಾಂಕ್ ಮಾದರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂಬ ಭರವಸೆ ನೀಡಿದರು.
ನಿಟ್ಟೆ ವಿವಿ ಕುಲಪತಿ ಪ್ರೊ. ಡಾ. ಕೆ. ಸತೀಶ್ ಕುಮಾರ್ ಭಂಡಾರಿ ಮಾತನಾಡಿ ರಾಜ್ಯದಲ್ಲಿಯೇ ಸುಟ್ಟ ಗಾಯದ ಚಿಕಿತ್ಸೆ ಕೊಡುವ ಆಧುನಿಕ ತಂತ್ರಜ್ಞಾನ ವುಳ್ಳ ಕೇಂದ್ರಗಳ ಸಂಖ್ಯೆ ವಿರಳವಾಗಿದ್ದು ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನೂತನ ಚಿಕಿತ್ಸಾ ಕೇಂದ್ರ ಕರಾವಳಿ ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೆ ವರವಾಗಲಿದೆ. ಈ ಹಿಂದೆ ಅಂಗಾಂಗಳ ಪೂರೈಕೆಗೆ ಮುಂಬಯಿ ಟಾಟಾ ಆಸ್ಪತ್ರೆಯನ್ನು ಅವಲಂಬಿಸಿಕೊಂಡಿರುವ ಕರಾವಳಿ ಭಾಗದ ಜನತೆಗೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಆರಂಭಿಸಲಾದ ಡಾ. ಶಾಂತಾರಾಮ ಶೆಟ್ಟಿ ಟಿಶ್ಯೂ ಬ್ಯಾಂಕ್ ಮೂಲಕ ಎಲುಬು, ಕಾರ್ನಿಯಾ ಮೊದಲಾದ ಅಂಗಾಂಗಳು ಲಭ್ಯವಾಗಲಿದೆ. ಆ ಮೂಲಕ ತುರ್ತು ಚಿಕಿತ್ಸೆ ಹಾಗೂ ಉತ್ತಮ ಸೇವೆಯೂ ಲಭ್ಯವಾಗಲಿದೆ ಎಂದರು.
ವೈದ್ಯಕೀಯ ಕೌನ್ಸಿಲ್‍ನ ಕೆಲವು ನಿಯಮಗಳು ಉತ್ತಮ ಗುಣಮಟ್ಟದ ಸೇವೆ ನೀಡುವ ಆಸ್ಪತ್ರೆಗಳಿಗೂ ಸಮಸ್ಯೆಯಾಗುತ್ತಿದೆ. ಕೆಲವೊಮ್ಮೆ ಅತ್ಯುತ್ತಮ ಸೇವೆ ನೀಡುವ ಆಸ್ಪತ್ರೆಗಳಲ್ಲಿ ಕೆಲವೇ ಅಡಿ ಸ್ಥಳಾವಕಾಶದ ಕೊರತೆ ಎದುರಾದಾಗ ಆ ಸಣ್ಣ ಕೊರತೆಯನ್ನು ಬೋರ್ಡ್ ಗಂಭೀರವಾಗಿ ತೆಗೆದುಕೊಳ್ಳುವುದರಿಂದ ಸಮಸ್ಯೆಗೆ ಕಾರಣವಾಗುತ್ತಿದೆ. ಆ ನಿಟ್ಟಿನಲ್ಲಿ ಬೋರ್ಡ್ ಅದಕ್ಕೆ ಅವಕಾಶ ಕೊಡುವ ದೃಷ್ಟಿಯಲ್ಲಿ ಪ್ರಯತ್ನಿಸಬೇಕು ಎಂದ ಅವರು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಎದುರಿಸುವ ಸಮಸ್ಯೆಗಳನ್ನು ವಿವರಿಸಿದರು.
ಸಹ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ ಸ್ವಾಗತಿಸಿದರು. ಡಾ. ಸಿದ್ಧಾರ್ಥ್ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ ಡೀನ್ ಡಾ. ಪ್ರಕಾಶ್ ಪಿ.ಎಸ್ ವಂದಿಸಿದರು.