ಬರೀ ಭರವಸೆ ನೀಡಿದ್ದಾರೆ ಹೊರತು ಒಂದನ್ನೂ ಈಡೇರಿಸಿಲ್ಲ

Update: 2019-03-24 17:33 GMT

ಹೊಸದಿಲ್ಲಿ, ಮಾ. 24: ಕೇಂದ್ರ ಸರಕಾರದಿಂದ ತಮಗೆ ಯಾವುದೇ ಪರಿಹಾರ ದೊರಕಿಲ್ಲ ಎಂದು ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳು ಆರೋಪಿಸಿವೆ ಎಂದು thequint.com ವರದಿ ಮಾಡಿದೆ.

‘‘ನಿರಂತರ ಹೋರಾಟದ ಬಳಿಕ ನಮಗೆ 10 ಲಕ್ಷ ಪರಿಹಾರ ಸಿಕ್ಕಿತು. ಹೋರಾಟ ಮಾಡದೇ ಇರುತ್ತಿದ್ದರೆ, ಅದು ಕೂಡ ಸಿಗುತ್ತಿರಲಿಲ್ಲ. ಅದನ್ನು ಅಖಿಲೇಶ್ ಸರಕಾರ ನೀಡಿತ್ತು. ಮತ್ತೇನೂ ನೀಡಿಲ್ಲ’’ ಎಂದು ದಾಳಿಯಲ್ಲಿ ಹುತಾತ್ಮರಾದ ಯೋಧ ಪನ್ನಾಲಾಲ್ ಯಾದವ್ ಅವರ ತಂದೆ ಉದಯ್ ಯಾದವ್ ಹೇಳಿದ್ದಾರೆ.

‘‘ಸರಕಾರ ನಮಗೆ ಹಲವು ಭರವಸೆಗಳನ್ನು ನೀಡಿತ್ತು. ಆದರೆ, ನಾವು ಅಖಿಲೇಶ್ ಸರಕಾರದಿಂದ ಕೇವಲ 10 ಲಕ್ಷ ಮಾತ್ರ ಪರಿಹಾರ ಪಡೆದೆವು. ಮನೆ, ಪ್ರತಿಮೆ, ಪಾರ್ಕ್, ರಸ್ತೆ, ವಿದ್ಯುತ್ ನೀಡುತ್ತೇವೆ ಎಂದು ಅವರು ಹೇಳಿದ್ದರು. ಆದರೆ, ಯಾವುದೇ ಸೌಲಭ್ಯ ನೀಡಿಲ್ಲ’’ ಎಂದು ಅವರು ಹೇಳಿದ್ದಾರೆ.

‘‘ಅವರು ಹಲವು ಭರವಸೆಗಳನ್ನು ನೀಡಿದ್ದಾರೆ. ಆದರೆ, ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ. ನಮ್ಮ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುತ್ತೇವೆ ಎಂದು ಅವರು ಹೇಳಿದ್ದರು. ರಸ್ತೆ ದುರಸ್ತಿ ಮಾಡಿಸುತ್ತೇವೆ ಎಂದು ತಿಳಿಸಿದ್ದರು. ಅವರ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದಿದ್ದರು. ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಆದರೆ, ಈಗ ಸರಕಾರ ಅವರ ಕುಟುಂಬಕ್ಕೆ ಒಂದು ಮೂರ್ತಿ ನಿರ್ಮಿಸಲು ಅಥವಾ ಉದ್ಯೋಗ ನೀಡಲು ಬಯಸುತ್ತಿಲ್ಲ’’ ಎಂದು ಹುತಾತ್ಮ ರಾಜೇಶ್ ಯಾದವ್ ಅವರ ಪತ್ನಿ ಪಾರ್ವತಿ ಹೇಳಿದ್ದಾರೆ.

‘‘ನಾನು ಸರಕಾರಕ್ಕೆ ಹಾಗೂ ಸಂಬಂಧಿತ ಪ್ರಾಧಿಕಾರಕ್ಕೆ ಲೆಕ್ಕವಿಲ್ಲದಷ್ಟು ಪತ್ರ ಬರೆದಿದ್ದೇನೆ. ಆದರೆ, ಯಾವುದೇ ಪ್ರತಿಕ್ರಿಯೆ ಇಲ್ಲ. ನಮಗೆ ಹಣ ನೀಡಲು ಬಯಸದೇ ಇದ್ದರೆ, ಅವರು ಲಿಖಿತವಾಗಿ ತಿಳಿಸಲಿ. ಸರಕಾರದ ಈ ನಡೆಯಿಂದ ನಾನು ಹತಾಶನಾಗಿದ್ದೇನೆ. ನಾನು ಪರಿಹಾರಕ್ಕಾಗಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆದಾಡುತ್ತಿದ್ದೇನೆ. ಇದಕ್ಕಾಗಿ ನನ್ನ ಎಲ್ಲ ಹಣವನ್ನು ಖರ್ಚು ಮಾಡಿದೆ. ಯಾವುದೂ ನಡೆಯದೇ ಇದ್ದರೆ, ನಾನು ಅರ್ಜಿ, ದಾಖಲೆಗಳನ್ನು ಹಿಡಿದುಕೊಂಡು ನ್ಯಾಯಾಲಯ ಸಂಪರ್ಕಿಸಲಿದ್ದೇನೆ’’ ಎಂದು ಹುತಾತ್ಮ ಯೋಧ ರಾಜೇಶ್ ಸಿಂಗ್ ಅವರ ತಂದೆ ರಾಜೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News