ಆಫ್ರಿಕ: ‘ಇಡಾಯ್’ ಚಂಡಮಾರುತಕ್ಕೆ 700ಕ್ಕೂ ಅಧಿಕ ಬಲಿ

Update: 2019-03-24 18:00 GMT

ಬಿಯೆರಾ (ಮೊಝಾಂಬಿಕ್),ಮಾ.25: ಆಫ್ರಿಕನ್ ರಾಷ್ಟ್ರಗಳಾದ ಮೊಝಾಂಬಿಕ್, ಝಿಂಬಾಬ್ವೆ ಹಾಗೂ ಮಲಾವಿಗಳಲ್ಲಿ ಚಂಡಮಾರುದ ಭೀಕರ ಹಾವಳಿಗೆ ಬಲಿಯಾದವರ ಸಂಖ್ಯೆ ಶನಿವಾರ 732ಕ್ಕೇರಿದೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಾವಿರಾರು ಮಂದಿ ಈಗಲೂ ಸಿಲುಕಿಕೊಂಡಿದ್ದು, ಆಹಾರ ಹಾಗೂ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಸಾವಿರಾರು ಗ್ರಾಮಗಳು ಜಲಾವೃತಗೊಂಡಿದ್ದು, ಪ್ರವಾಹಸಂತ್ರಸ್ತರು ಮನೆಗಳ ಛಾವಣಿಗಳಲ್ಲಿ ಹಾಗೂ ಮರಗಳಲ್ಲಿ ಆಶ್ರಯ ಪಡೆದುಕೊಂಡಿದ್ದು, ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ. ಹೆಲಿಕಾಪ್ಟರ್ ಹಾಗೂ ದೋಣಿಗಳ ಮೂಲಕ ಸೈನಿಕರು ಹಾಗೂ ರಕ್ಷಣಾ ಕಾರ್ಯಕರ್ತರು ದೋಣಿಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ಪ್ರವಾಹಪೀಡಿತ ಮೊಝಾಂಬಿಕ್‌ನ ಬಂದರು ಪಟ್ಟಣವಾದ ಬಿಯೆರಾದ ತಗ್ಗು ಪ್ರದೇಶಗಳಲ್ಲಿ ರವಿವಾರವೂ ಭಾರೀ ಮಳೆಯಾಗುತ್ತಿರುವುದರಿಂದ ನೆರೆ ಪರಿಸ್ಥಿತಿ ಉಲ್ಬಣಿಸುವ ಸಾಧ್ಯತೆಯಿದೆಯೆಂದು ವಿಶ್ವಸಂಸ್ಥೆಯ ಮಾನವೀಯ ನೆರವಿನ ಕಚೇರಿಯು ಎಚ್ಚರಿಕೆ ನೀಡಿದೆ. ಪ್ರಮುಖ ನದಿಗಳಾದ ಬುಝಿ ಹಾಗೂ ಪುಂಗ್ವೆಗಳು ಉಕ್ಕಿ ಹರಿಯುತ್ತಿವೆ. ಆಸುಪಾಸಿನ ಅಣೆಕಟ್ಟುಗಳು ಭರ್ತಿಯಾಗಿದ್ದು, ಒಡೆಯುವ ಅಪಾಯವಿದೆಯೆಂದು ಅದು ಆತಂಕ ವ್ಯಕ್ತಪಡಿಸಿದೆ.

ಈ ಮಧ್ಯೆ ನೆರೆಪೀಡಿತ ಪ್ರದೇಶಗಳಲ್ಲಿ ಕಾಲರಾ ರೋಗದ ಪ್ರಕರಣಗಳು ವ್ಯಾಪಕವಾಗಿ ವರದಿಯಾಗಿರುವುದಾಗಿ ಮೂಲಗಳು ತಿಳಿಸಿವೆ.

ಮೊಝಾಂಬಿಕ್‌ನ ಬಂದರು ನಗರವಾದ ಬಿಯೆರಾದಲ್ಲಿ ಕಳೆದ ವಾರ ಇಡಾಯ್ ಚಂಡಮಾರುತ ಅಪ್ಪಳಿಸಿತ್ತು. ತಾಸಿಗೆ 170 ಕಿ.ಮೀ. ವೇಗದಲ್ಲಿ ಧಾವಿಸುತ್ತಿರುವ ಈ ಚಂಡಮಾರುತವು ಆನಂತರ ನೆರೆಯ ಝಿಂಬಾಬ್ವೆ ಹಾಗೂ ಮಲಾವಿ ದೇಶಗಳಿಗೆ ಹಾದುಹೋಗಿದೆ.

ಝಿಂಬಾಬ್ವೆಯಲ್ಲಿಯೂ 259 ಮಂದಿ ಮಂದಿಯನ್ನು ಇಡಾಯ್ ಚಂಡಮಾರುತ ಬಲಿತೆಗೆದುಗೊಂಡಿದ್ದು, ವ್ಯಾಪಕ ನಾಶನಷ್ಟವುಂಟು ಮಾಡಿದೆ. ಮಲಾವಿಯಲ್ಲಿ ಚಂಡಮಾರುತದ ಬಳಿಕ ಭಾರೀ ಮಳೆ ಸುರಿದ ಸಂಭವಿಸಿದ ಪ್ರವಾಹದಲ್ಲಿ ಕನಿಷ್ಠ 56 ಮಂದಿ ಸಾವನ್ನಪ್ಪಿದ್ದಾರೆ. ಈ ಮೂರು ದೇಶಗಳಲ್ಲಿ ಪ್ರವಾಹ ಸಂತ್ರಸ್ತರು, ಜಲಸಮಾಧಿಯಾದ ತಮ್ಮ ಬಂಧುಗಳನ್ನು ಹುಡುಕಾಡಲು ಕೆಸರು ತುಂಬಿದ ನೆಲಗಳನ್ನು ಅಗೆಯುತ್ತಿದ್ದಾರೆ. ಪ್ರವಾಹ ಪೀಡಿತರ ರಕ್ಷಣಾ ಕಾರ್ಯಾಚರಣೆಯಲ್ಲಿ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಗೂ ದೇಶಗಳು ಕೈಜೋಡಿಸಿದ್ದು, ಸಂತ್ರಸ್ತರಿಗೆ ಆಹಾರ ಹಾಗೂ ಔಷಧಿಗಳನ್ನು ಪೂರೈಕೆ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News