ಕಾಂಗ್ರೆಸ್ ಸೇರಿದ ಬಾಲಿವುಡ್ ತಾರೆ ಉರ್ಮಿಳಾ ಮಾತೋಂಡ್ಕರ್
ಮುಂಬೈ,ಮಾ.27: ಲೋಕಸಭಾ ಚುನಾವಣೆಗೆ ಎರಡು ವಾರಗಳಷ್ಟೇ ಬಾಕಿಯಿದ್ದು, ಈ ಮಧ್ಯೆ ಬಾಲಿವುಡ್ ನಟಿ ಉರ್ಮಿಳಾ ಮಾತೊಂಡ್ಕರ್ ಬುಧವಾರ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.
ಉರ್ಮಿಳಾರನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಮುಂಬೈಯ ನೂತನ ಕಾಂಗ್ರೆಸ್ ಮುಖ್ಯಸ್ಥ ಮಿಲಿಂದ್ ದಿಯೊರ ಪಕ್ಷಕ್ಕೆ ಸ್ವಾಗತಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾತೊಂಡ್ಕರ್, ನನ್ನನ್ನು ಪಕ್ಷಕ್ಕೆ ಸ್ವಾಗತಿಸಿದ್ದಕ್ಕೆ ಎಲ್ಲ ಕಾಂಗ್ರೆಸ್ ಸದಸ್ಯರಿಗೆ, ಮುಖ್ಯವಾಗಿ ರಾಹುಲ್ ಗಾಂಧಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇಂದು ನನಗೆ ಬಹಳ ಪ್ರಮುಖ ದಿನವಾಗಿದೆ. ಯಾಕೆಂದರೆ ನಾನು ಇಂದು ರಾಜಕೀಯಕ್ಕೆ ಕಾಲಿಡುತ್ತಿದ್ದೇನೆ. ನನ್ನ ಕುಟುಂಬ ಗಾಂಧಿ ಮತ್ತು ನೆಹರೂ ಆದರ್ಶವನ್ನು ಪಾಲಿಸುತ್ತದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ವಾಕ್‌ಸ್ವಾತಂತ್ರ ಅತ್ಯಂತ ಅಗತ್ಯವಾಗಿದೆ. ಇಂದು ನಮ್ಮ ವಾಕ್‌ಸ್ವಾತಂತ್ರ ಅಪಾಯದಲ್ಲಿದೆ. ನಾನು ಇಲ್ಲಿ ಸೌಂದರ್ಯ ಪ್ರದರ್ಶಿಸಲು ಬಂದಿಲ್ಲ. ನಾನು ಇಲ್ಲಿ ಸ್ಥಿರವಾಗಿ ನಿಲ್ಲಲು ಬಂದಿದ್ದೇನೆ. ನನಗೆ ಕಾಂಗ್ರೆಸ್ ಸಿದ್ಧಾಂತದ ಮೇಲೆ ಇರುವ ನಂಬಿಕೆಯಿಂದ ಬಂದಿದ್ದೇನೆ ಎಂದು ಮಾತೊಂಡ್ಕರ್ ತಿಳಿಸಿದ್ದಾರೆ.