×
Ad

ಮಾ. 29: ಗಂಧದ ಕುಡಿ ಚಲನಚಿತ್ರ ತೆರೆಗೆ

Update: 2019-03-27 20:03 IST

ಮಂಗಳೂರು, ಮಾ. 27: ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಮೂಡಿಸುವ ನಿಟ್ಟಿನಲ್ಲಿ ಚಿತ್ರೀಕರಿಸಲಾದ ಚಿತ್ರ ‘ಗಂಧದದ ಕುಡಿ ’ (ಗಂಧದ ಚಿಗುರು) ಚಲನಚಿತ್ರ ಮಾರ್ಚ್ 29ರಂದು ಮಲ್ಟಿಫೆಕ್ಸ್ ಸೇರಿದಂತೆ ರಾಜ್ಯಾದ್ಯಂತ ವಿವಿಧ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶೀಘ್ರದಲ್ಲಿ ಹಿಂದಿಯಲ್ಲೂ ’ಚಂದನವನ’ ಹೆಸರಿನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಇನ್ವೆಂಜರ್ ಟೆಕ್ನಾಲಜೀಸ್ ನಿರ್ದೇಶಕರಾದ ಕೆ. ಸತ್ಯೇಂದ್ರ ಪೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚಿತ್ರ ಪ್ರದರ್ಶನದ ಮೊದಲೇ ಇಹಲೋಕ ತ್ಯಜಿಸಿದ ನಿರ್ದೇಶಕ:- ಬಾಲಿವುಡ್‌ನ ಮಂಗಲ್ ಪಾಂಡೆ ಜೊದಾ ಅಕ್ಬರ್ ಮುಂತಾದ ಚಿತ್ರಗಳ ಕಲಾ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಅನುಭವ ಹೊಂದಿದ್ದ ಸಂತೋಷ್ ಶೆಟ್ಟಿ ಗಂಧದ ಕುಡಿ ಚಿತ್ರದ ನಿರ್ದೇಶನದ ಬಳಿಕ ಚಿತ್ರ ಬೆಳ್ಳಿ ತೆರೆಗೆ ಬರುವ ಮುನ್ನ ದುರಂತಕ್ಕೀಡಾಗಿ ಸಾವನ್ನಪ್ಪಿರುವುದನ್ನು ಇಡೀ ಚಿತ್ರ ತಂಡ ನೆನಪಿಸಿಕೊಳ್ಳುತ್ತಿದೆ. ಸಂತೋಷ್ ಶೆಟ್ಟಿ ಈ ಹಿಂದೆ ಕನಸು ಕಣ್ಣು ತೆರೆದಾಗ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ತಮ್ಮ ಎರಡನೆ ಚಲನಚಿತ್ರ ಗಂಧದ ಕುಡಿಯನ್ನು ಅಚ್ಚು ಕಟ್ಟಾಗಿ ನಿರ್ದೇಶಿಸಿದ್ದಾರೆ ಅವರನ್ನು ಕಳೆದುಕೊಂಡಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಸತ್ಯೇಂದ್ರ ಪಯ ತಿಳಿಸಿದ್ದಾರೆ.

ಚಿತ್ರದ ಆಡಿಯೋ ಈಗಾಗಲೆ ಬಿಡುಗಡೆಯಾಗಿದೆ. ಈ ಚಲನಚಿತ್ರ ಈಗಾಗಲೇ ಭಾರತ ಅಲ್ಲದೆ, ಅಮೆರಿಕಾ, ಸ್ಯಾನ್ ಡಿಯೋಗ, ಮೆಕ್ಸಿಕೋ, ಚಿಲಿ ಮೊದಲಾದ ಕಡೆಗಳಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 20ಕ್ಕೂ ಅಧಿಕ ಪ್ರಶಸ್ತಿಯನ್ನು ಪಡೆದುಕೊಂಡಿದೆ ಪಶ್ಚಿಮ ಘಟ್ಟಗಳ ನಾಶದಿಂದ ಉಂಟಾಗುವ ಜಾಗತಿಕ ದುಷ್ಪಾರಿಣಾಮದ ಚಿತ್ರಣವನ್ನು ಮಕ್ಕಳ ಮೂಲಕ ಸಮಾಜಕ್ಕೆ ಸರಳ ನಿರೂಪಣೆಯ ಮೂಲಕ ಗಂಧದ ಕುಡಿ ಚಿತ್ರ ಮಲೆನಾಡಿನ ಪ್ರಾಕೃತಿಕ ರಮ್ಯ ತಾಣಗಳಲ್ಲಿ ಚಿತ್ರೀಕರಣ ಗೊಂಡಿದೆ ಎಂದು ಸತ್ಯೇಂದ್ರ ಪೈ ತಿಳಿಸಿದ್ದಾರೆ.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮುಂಬೈಯ ನಿಧಿ ಸಂಜೀವ ಶೆಟ್ಟಿ, ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಕೀಷಾ, ಆಶ್ಲಿನ್, ಪ್ರಣತಿ, ವಿಗ್ನೇಶ್, ಶ್ರೀಶಾ, ಶ್ರೇಯಸ್ ಮುಂತಾದ ಬಾಲಕಲಾವಿದರು ನಟಿಸಿದ್ದಾರೆ.

ಕನ್ನಡ ಖ್ಯಾತ ನಟರಾದ ರಮೇಶ್ ಭಟ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಶಿವಧ್ವಜ್, ಜ್ಯೋತಿ ರೈ, ಅರವಿಂದ, ಶೆಟ್ಟಿ ಕೊಜಕೊಳ್ಳಿ, ದೀಪಕ್ ಶೆಟ್ಟಿ, ಯೋಗೀಶ್ ಕೋಟ್ಯಾನ್, ಜಿ.ಪಿ.ಭಟ್ ನಟಿಸಿದ್ದಾರೆ.

ನಾಲ್ಕು ಹಾಡುಗಳಿದ್ದು ರಝಾಕ್ ಪುತ್ತೂರು ಸಾಹಿತ್ಯ ಸಂಭಾಷಣೆ ಬರೆದಿದ್ದಾರೆ. ಪ್ರಸಾದ್ ಕೆ.ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ಗಾಯಕ ವಿಜಯ ಪ್ರಕಾಶ್, ಶ್ರೇಯಾ ಜೈದೀಪ್, ಪ್ರಕಾಶ್ ಮಹಾದೇವ್, ರವಿ ಮಿಶ್ರಾ, ಸ್ವಾತಿ ಜೈನ್, ಲತೇಶ್ ಪೂಜಾರಿ ಮೊದಲಾದವರ ಹಾಡುಗಳಿವೆ.

ಸಚಿನ್ ಶೆಟ್ಟಿ, ಲಕ್ಷ್ಮೀಶ್ ಶೆಟ್ಟಿಯವರ ಛಾಯಾ ಗ್ರಹಣ, ರವಿರಾಜ ಗಾಣಿಗರವರ ಸಂಕಲನದೊಂದಿಗೆ ಪ್ರದೀಪ್ ರಾಯ್ ಕಲಾ ನಿರ್ದೇಶನ,ಪ್ರೀತಾ ಮಿನೇಜಸ್ ಸಹ ನಿರ್ದೇಶನ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಸಹ ನಿರ್ಮಾಪಕರಾದ ಕೃಷ್ಣ ಮೋಹನ್ ಪೈ,ಸಂಗೀತ ನಿರ್ದೇಶಕ ಪ್ರಸಾದ್ ಶೆಟ್ಟಿ,ಸಹ ನಿರ್ದೇಶಕಿ ಪ್ರೀತಾ ಮಿನೇಜಸ್,ಸಾಹಿತ್ಯ ಮತ್ತು ಗೀತೆ ರಚಿಸಿದ ರಝಾಕ್ ಪುತ್ತೂರು,ನಟಿ ನಿಧಿ ಎಸ್.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News