×
Ad

ಮಂಗಳೂರು: ಅಪಾರ್ಟ್ ಮೆಂಟ್ ಲಿಫ್ಟ್‌ನಲ್ಲಿ ಸಿಲುಕಿ ಬಾಲಕ ಮೃತ್ಯು

Update: 2019-03-27 21:30 IST

ಮಂಗಳೂರು, ಮಾ. 27: ಲಿಫ್ಟ್‌ನಲ್ಲಿ ಬಾಲಕನೊಬ್ಬ ಸಿಲುಕಿ ಸಾವನ್ನಪ್ಪಿದ ಘಟನೆ ನಗರದ ಚಿಲಿಂಬಿಯ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಸಂಜೆ ನಡೆದಿದೆ.

ಬಾಗಲಕೋಟೆಯ ಹುನಗಂದ ನಿವಾಸಿ ನೀಲಪ್ಪ ಎಂಬವರ ಪುತ್ರ ಮಂಜುನಾಥ್ (8) ಮೃತ ಬಾಲಕ.

ಮಂಜುನಾಥ್ ಉರ್ವ ಬಳಿ ಇರುವ ಕೆನರಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ. ಬಾಗಲಕೋಟೆ ಜಿಲ್ಲೆಯ ಹುನಗುಂದದ ಹೂವಿನಹಡಗಲಿಯ ನೀಲಪ್ಪ ಅವರು ಈ ಅಪಾರ್ಟ್‌ಮೆಂಟ್ ಕಾವಲಿಗಿದ್ದು, ಇವರ ಪುತ್ರನೇ ಲಿಫ್ಟ್‌ಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಇದು ಹಳೆಯ ಲಿಫ್ಟ್ ಎನ್ನಲಾಗಿದೆ. ಲಿಫ್ಟ್‌ನೊಳಗೆ ಹೋಗುವಾಗ ಬಾಗಿಲು ಹಾಕದೆ ಲಿಫ್ಟ್‌ ಚಾಲನೆ ಮಾಡಿದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಉರ್ವ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಈ ಬಗ್ಗೆ ಮಂಗಳೂರಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2018ರ ಆಗಸ್ಟ್ ತಿಂಗಳಲ್ಲಿ ಕದ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬಂಟ್ವಾಳ ಮೂಲದ ಅಡ್ಡೂರಿನ ದಂಪತಿಯ ಪುತ್ರ ಮುಹಮ್ಮದ್ ಸಿನಾನ್ (7) ಲಿಫ್ಟ್‌ ನಲ್ಲಿ ಸಿಲುಕಿ ಸಾವನ್ನಪ್ಪಿದ್ದ. ಈ ಘಟನೆಯ ನೆನಪು ಮಾಸಿ ಹೋಗುವ ಮೊದಲೇ ಮತ್ತೊಂದು ದುರಂತಕ್ಕೆ ಮಂಗಳೂರು ಸಾಕ್ಷಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News