×
Ad

ಕಾರ್ಕಳ: ವಿಶ್ವ ಕ್ಷಯರೋಗ ದಿನಾಚರಣೆ

Update: 2019-03-27 22:03 IST

ಉಡುಪಿ, ಮಾ. 27: ರೋಗಿ ಸಕಾಲದಲ್ಲಿ ಸಮರ್ಪಕ ಚಿಕಿತ್ಸೆ ಪಡೆಯುವ ಮೂಲಕ ಕ್ಷಯರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವಂತೆ ಕಾರ್ಕಳ ತಾಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಡಾ. ಮೇಜರ್ ಹರ್ಷ ಕೆ.ಬಿ ಯುವಕರಿಗೆ ಕರೆ ನೀಡಿದ್ದಾರೆ.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಕಾರ್ಕಳ, ಸರಕಾರಿ ಸಾರ್ವಜನಿಕ ಆಸ್ಪತ್ರೆ ಕ್ಷಯರೋಗ ನಿಯಂತ್ರಣಾ ಘಟಕ ಕಾರ್ಕಳ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಶ್ರೀುವನೇಂದ್ರ ಕಾಲೇಜು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. 

ಕ್ಷಯರೋಗ ಒಂದು ಸಾಂಕ್ರಮಿಕ ರೋಗ. ಇದು ಮೈಕೋ ಬ್ಯಾಕ್ಟಿರಿಯಂ ಟ್ಯುಬರ್‌ಕ್ಯುಲೋಸಿಸ್ ಎಂಬ ಸೂಕ್ಷ್ಮಾಣುವಿನಿಂದ ಬರುತ್ತದೆ. ಕ್ಷಯರೋಗಿ ಕೆಮ್ಮಿದಾಗ, ಸೀನಿದಾಗ ಕ್ರಿಮಿಗಳು ಗಾಳಿಯಲ್ಲಿ ಸೇರಿ ಇತರರು ಉಸಿರಾಡುವಾಗ ದೇಹವನ್ನು ಪ್ರವೇಶಿಸಿ, ಕ್ಷಯರೋಗವನ್ನುಂಟು ಮಾಡುವುದು. ಕ್ಷಯರೋಗದ ಲಕ್ಷಣಗಳು, ಪತ್ತೆ ಹಚ್ಚುವ ವಿಧಾನ ಮತ್ತು ಗುಣಮಟ್ಟದ ಚಿಕಿತ್ಸಾ ಔಷಧಿಗಳು ಲಭ್ಯವಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿ ಕಾರಿ ಡಾ.ಚಿದಾನಂದ ಸಂಜು ಮಾತನಾಡಿ, 2 ವಾರಗಳಿಗಿಂತ ಹೆಚ್ಚು ಸತತವಾದ ಕೆಮ್ಮು ಕಂಡುಬಂದಲ್ಲಿ ಅದು ಟಿಬಿ ಆಗಿರಬಹುದು. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಸರಕಾರಿ ಆಸ್ಪತ್ರೆಗೆ ತೆರಳಿ ಕಫ ಪರೀಕ್ಷೆ ಮಾಡಿಸಿ ಕೊಳ್ಳುವಂತೆ ತಿಳಿಸಿದರು.

ಪ್ರಸ್ತುತ ಭಾರತದಲ್ಲಿ ಕ್ಷಯರೋಗವು ಮಾರಕವಾಗಿ ಪರಿಣಮಿಸಿದ್ದು ಇದನ್ನು ನಿಯಂತ್ರಿಸುವ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಬೇಕು. ಕೇಂದ್ರ ಸರಕಾರ 2025ನೇ ವರ್ಷದೊಳಗೆ ಭಾರತವನ್ನು ಕ್ಷಯ ಮುಕ್ತಗೊಳಿಸುವ ಗುರಿಯನ್ನು ಹಾಕಿಕೊಂಡಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್ ಎ.ಕೋಟ್ಯಾನ್, ಸಹಾಯಕ ಪ್ರಾಧ್ಯಾಪಕ ಶಿವಶಂಕರ್ ಮಾತನಾಡಿದರು. ಪುರಸಭಾ ಮುಖ್ಯಾಧಿಕಾರಿ ಮೇಬಲ್ ಡಿ ಸೋಜಾ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಆರೋಗ್ಯ ಅಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಕಳ ತಾಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಡಾ.ಮೇಜರ್ ಹರ್ಷ ಕೆ.ಬಿ. ಮತದಾನ ಜಾಗೃತಿ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಬ್ರಹ್ಮಾವರ ಕ್ಷಯ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಆಲಂದೂರು ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News