×
Ad

ಪ್ರಮೋದ್ ವಿರುದ್ಧ ಆರೋಪ ಮಾಡದಂತೆ ಅಬ್ರಹಾಂಗೆ ನ್ಯಾಯಾಲಯ ತಡೆಯಾಜ್ಞೆ

Update: 2019-03-27 22:41 IST

ಉಡುಪಿ, ಮಾ. 27: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಮೋದ್ ಮಧ್ವರಾಜ್ ವಿರುದ್ಧ ಯಾವುದೇ ಆರೋಪಗಳನ್ನು ಮಾಡದಂತೆ, ಪ್ರಕಟಿಸದಂತೆ, ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಾರಿಸದಂತೆ ಉಡುಪಿಯ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಇಂದು ಬೆಂಗಳೂರಿನ ಆರ್‌ಟಿಐ ಕಾರ್ಯಕರ್ತ ಅಬ್ರಹಾಂ ಟಿ.ಜೆ. ಅವರಿಗೆ ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದೆ.

ತನ್ನ ವಿರುದ್ಧ ಅಬ್ರಹಾಂ ಅವರು ಸುಳ್ಳು, ಆಧಾರರಹಿತ, ಮಾನಹಾನಿಕರ ಆರೋಪಗಳನ್ನು ಮಾಡುತಿದ್ದು, ಇಂಥ ಆರೋಪಗಳನ್ನು ಮಾಡದಂತೆ ತಡೆಯಾಜ್ಞೆ ನೀಡಬೇಕೆಂದು ಪ್ರಮೋದ್ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ವಿನಂತಿಸಿದ್ದರು.

ಅರ್ಜಿಯ ಕುರಿತು ಇಂದು ವಿಚಾರಣೆ ನಡೆಸಿದ ನ್ಯಾಯಾಲಯ, ಈ ಕುರಿತು ಮಧ್ಯಂತರ ತಡೆಯಾಜ್ಞೆ ವಿಧಿಸಿ ಆದೇಶ ಹೊರಡಿಸಿದೆ ಎಂದು ಪ್ರಮೋದ್ ಪರವಾಗಿ ವಾದಿಸಿದ ನ್ಯಾಯವಾದಿ ದೇವರಾಜ್ ಶೆಟ್ಟಿಗಾರ್ ತಿಳಿಸಿದ್ದಾರೆ.

ಅಬ್ರಹಾಂ ಅವರಾಗಲೀ, ಅವರ ಕಡೆಯವರಾಗಲೀ, ಏಜೆಂಟ್‌ಗಳು, ಪ್ರತಿನಿಧಿಗಳಾಗಲಿ, ಅರ್ಜಿದಾರರ ವಿರುದ್ಧ ಯಾವುದೇ ಪತ್ರಿಕಾ ಹೇಳಿಕೆ ನೀಡುವುದಾಗಲೀ, ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುವುದಾಗಲಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ಪ್ರಕಟಿಸುವುದನ್ನು ನಿರ್ಬಂಧಿಸಿ ತಾತ್ಕಾಲಿಕ ತಡೆಯಾಜ್ಞೆಯನ್ನು ನ್ಯಾಯಾಲಯ ನೀಡಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News