ಮಿಶನ್ ಶಕ್ತಿ ಭಾರತದ ಯೋಜನೆ ಹೊರತು ಬಿಜೆಪಿಯದ್ದಲ್ಲ: ಅರುಣ್ ಜೇಟ್ಲಿ

Update: 2019-03-27 17:17 GMT

ಹೊಸದಿಲ್ಲಿ,ಮಾ.27: ಮಿಶನ್ ಶಕ್ತಿ ಕಾರ್ಯಾಚರಣೆಯ ಸಾಂದರ್ಭಿಕತೆ ಬಗ್ಗೆ ವಿಪಕ್ಷಗಳು ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಇದು ಮತ್ತೇನೂ ಅಲ್ಲ ವಿಪಕ್ಷಗಳ ಎಂದಿನ ಗೋಳು ಎಂದು ಎದಿರೇಟು ನೀಡಿದ್ದಾರೆ.

ಭಾರತದ ಪರಮಾಣು ಕಾರ್ಯಕ್ರಮವು ನಿರಂತರವಾಗಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗೋ ಅಥವಾ ಬೇರೆ ರಾಜಕೀಯ ನಾಯಕರಿಗೆ ಸರಿಹೊಂದುವುದಿಲ್ಲ ಎಂದ ಮಾತ್ರಕ್ಕೆ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಜೇಟ್ಲಿ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ರಾಷ್ಟ್ರವನ್ನು ಸಂಬೋಧಿಸಿ ಮಾತನಾಡುವ ಮೂಲಕ ಮತ್ತು ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ಕೆಲಸಕ್ಕೆ ತಾನು ಹೆಸರು ಪಡೆಯುವ ಮೂಲಕ ಶಕ್ತಿ ಯೋಜನೆಯನ್ನು ನಾಟಕೀಯಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ನಾಳಿನ ಯುದ್ಧಗಳು ಈಗಿನಂತೆ ಇರುವುದಿಲ್ಲ ಮತ್ತು ಭವಿಷ್ಯದ ಭೂರಾಜಕೀಯ ಪರಿಸ್ಥಿತಿಯನ್ನು ಎದುರಿಸಲು ದೇಶ ಸಿದ್ಧವಾಗಿರಬೇಕು ಮತ್ತು ಅದೇ ನಿರ್ಣಾಯಕವಾಗಿರಲಿದೆ ಎಂದು ಜೇಟ್ಲಿ ತಿಳಿಸಿದ್ದಾರೆ. ಅಷ್ಟಕ್ಕೂ ಮಿಶನ್ ಶಕ್ತಿ ಭಾರತಕ್ಕೆ ಸಂಬಂಧಪಟ್ಟ ಯೋಜನೆಯಾಗಿದ್ದು ಬಿಜೆಪಿಯ ಯೋಜನೆಯಲ್ಲ ಎಂದು ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News