‘ಮೈ ಭೀ ಚೌಕಿದಾರ್ ಹೂಂ’ ವೀಡಿಯೊ ಶೇರ್ ಮಾಡಿದ ಬಿಜೆಪಿ ಚುನಾವಣಾ ಸಮಿತಿ ಸದಸ್ಯನಿಗೆ ನೋಟಿಸ್

Update: 2019-03-27 17:40 GMT

ಹೊಸದಿಲ್ಲಿ,ಮಾ.27: ತನ್ನ ನಿರ್ದೇಶಗಳನ್ನು ಪಾಲಿಸದೆ ‘ಮೈ ಭೀ ಚೌಕಿದಾರ್ ಹೂಂ’ 3ಶೀರ್ಷಿಕೆಯ ವೀಡಿಯೊ ಜಾಹೀರಾತನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿದ್ದಕ್ಕಾಗಿ ಬಿಜೆಪಿಯ ರಾಷ್ಟ್ರೀಯ ಚುನಾವಣಾ ಸಮಿತಿಯ ಸದಸ್ಯ ನೀರಜ್ ಅವರಿಗೆ ಚುನಾವಣಾ ಆಯೋಗ(ಇಸಿ)ವು ಬುಧವಾರ ಶೋಕಾಸ್ ನೋಟಿಸ್‌ನ್ನು ಹೊರಡಿಸಿದ್ದು,ಮೂರು ದಿನಗಳಲ್ಲಿ ಉತ್ತರಿಸುವಂತೆ ತಾಕೀತು ಮಾಡಿದೆ.

ಆಯೋಗದ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿ(ಎಂಸಿಎಂಸಿ)ಯು ಸೇನಾ ಸಿಬ್ಬಂದಿಗಳನ್ನು ತೋರಿಸಿರುವ ತುಣುಕುಗಳನ್ನು ಹೊರತುಪಡಿಸಿ ಸದ್ರಿ ಜಾಹೀರಾತಿಗೆ ಸಂಬಂಧಿಸಿದಂತೆ ನೀರಜ್ ಅವರಿಗೆ ಮಾ.16ರಂದು ಪ್ರಮಾಣಪತ್ರವನ್ನು ವಿತರಿಸಿತ್ತು ಎಂದು ಆಯೋಗದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಮಾ.16ರಂದು ‘ಮೈ ಭೀ ಚೌಕಿದಾರ್ ಹೂಂ’ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಈ ವೇಳೆ ಅವರು ಅಭಿಯಾನಕ್ಕೆ ಸಂಬಂಧಿಸಿದ ವೀಡಿಯೊವೊಂದನ್ನೂ ಟ್ವೀಟ್ ಮಾಡಿದ್ದು,ಗುಂಪೊಂದು ಸೇನಾ ಸಮವಸ್ತ್ರದಲ್ಲಿ ಅಣಕು ಕಾರ್ಯಾಚರಣೆಯಲ್ಲಿ ತೊಡಗಿದ್ದ ದೃಶ್ಯಗಳನ್ನೂ ಇದು ಒಳಗೊಂಡಿತ್ತು.

ದೇಶದ ರಕ್ಷಣಾ ಸಿಬ್ಬಂದಿಗಳನ್ನು ಪ್ರಚಾರ ಅಭಿಯಾನದಿಂದ ಹೊರಗಿರಿಸುವಂತೆ ಮತ್ತು ಜಾಹೀರಾತುಗಳಲ್ಲಿ ಅವರ ಚಿತ್ರಗಳನ್ನು ಬಳಸದಂತೆ ಚುನಾವಣಾ ಆಯೋಗವು ಈ ತಿಂಗಳ ಆರಂಭದಲ್ಲಿ ರಾಜಕೀಯ ಪಕ್ಷಗಳಿಗೆ ನಿರ್ದೇಶ ನೀಡಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯನ್ನು ತಡೆಯುವ ಪ್ರಯತ್ನವಾಗಿ ಆಯೋಗವು ತಮ್ಮ ಡಿಜಿಟಲ್ ಜಾಹೀರಾತುಗಳನ್ನು ಪೋಸ್ಟ್ ಮಾಡುವ ಮುನ್ನ ಎಂಸಿಎಂಸಿಯಿಂದ ಪ್ರಮಾಣಪತ್ರ ಪಡೆದುಕೊಳ್ಳುವಂತೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News