ಹಿರಿಯಡ್ಕ ಜೈಲಿನಲ್ಲಿ ರೌಡಿ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ದೋಷಿ
ಉಡುಪಿ, ಮಾ.27: ಒಂಭತ್ತು ವರ್ಷಗಳ ಹಿಂದೆ ಹಿರಿಯಡ್ಕ ಅಂಜಾರು ಗ್ರಾಮದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆದ ರೌಡಿ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ದೋಷಿ ಎಂಬುದಾಗಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಮಾ.28ರಂದು ಪ್ರಕಟಿಸಲಿದೆ.
ಬ್ರಹ್ಮಾವರ ಬೈಕಾಡಿ ಸಮೀಪದ ಮುತ್ತಪ್ಪ ಯಾನೆ ಸುರೇಶ್ ಬಳೆಗಾರ (36), ಆತನ ತಮ್ಮ ನಾಗರಾಜ ಬಳೆಗಾರ (33), ಮೈಸೂರಿನ ಶೇಖ್ ರಿಯಾಝ್ ಅಹಮದ್ (33), ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶರಣಪ್ಪ ಅಮರಾಪುರ (33) ದೋಷಿಗಳಾಗಿದ್ದು, ಪ್ರಕರಣದ ಆರೋಪಿ ಕುಕ್ಕಿಕಟ್ಟೆ ಇಂದಿರಾ ನಗರದ ರಾಘವೇಂದ್ರ ಯಾನೆ ರಾಘು ಎಂಬಾತನನ್ನು ನ್ಯಾಯಾ ಲಯ ಖುಲಾಸೆಗೊಳಿಸಿದೆ. ಇನ್ನೋರ್ವ ಆರೋಪಿ ರೌಡಿ ಇಂದಿರಾನಗರದ ಪಿಟ್ಟಿ ನಾಗೇಶ್ ವಿಚಾರಣೆ ಮಧ್ಯಾವಧಿಯಲ್ಲಿ ಕೊಲೆಯಾಗಿದ್ದಾನೆ.
ಪ್ರಕರಣದ ಹಿನ್ನೆಲೆ: ರೌಡಿ ಪಿಟ್ಟಿ ನಾಗೇಶ್ ಕೊಲೆಯತ್ನ ಪ್ರಕರಣದಲ್ಲಿ ಕೊರಂಗ್ರಪಾಡಿಯ ವಿನೋದ್ ಶೆಟ್ಟಿಗಾರ್ ಹಿರಿಯಡ್ಕ ಜೈಲು ಪಾಲಾಗಿ ವಿಚಾ ರಣಾಧೀನ ಕೈದಿಯಾಗಿದ್ದನು. ಇದೇ ಸಂದರ್ಭ ಕಳವು ಸೇರಿದಂತೆ ಇತರ ಪ್ರಕರಣಕ್ಕೆ ಸಂಬಂಧಿಸಿ ಮುತ್ತಪ್ಪ, ನಾಗರಾಜ, ರಿಯಾಝ್, ಶರಣಪ್ಪ ಜೈಲಿನಲ್ಲಿ ದ್ದರು. ಇವರು ಜೈಲಿಗೆ ಸೇರ್ಪಡೆಯಾಗುತ್ತಿದ್ದ ಸಹಕೈದಿಗಳ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಯನ್ನು ವಿನೋದ್ ಶೆಟ್ಟಿಗಾರ್ ತಡೆಯುತ್ತಿದ್ದನು.
ಅಲ್ಲದೆ 2011ರ ಜ.11ರಂದು ಈ ನಾಲ್ವರು ಸಹಕೈದಿ ಜಲಾಲುದ್ದೀನ್ ಎಂಬಾತನ ಮೇಲೆ ಹಲ್ಲೆ ನಡೆಸಿರುವುದಕ್ಕೆ ವಿನೋದ್ ಶೆಟ್ಟಿಗಾರ್ ಆಕ್ಷೇಪಿಸಿ ಬೆದರಿಕೆಯೊಡ್ಡಿದ್ದನು. ಇದರಿಂದ ಈ ನಾಲ್ವರಿಗೆ ವಿನೋದ್ ಶೆಟ್ಟಿಗಾರ್ ಮೇಲೆ ಧ್ವೇಷ ಹುಟ್ಟಿ ಕೊಲೆಗೆ ಸಂಚು ರೂಪಿಸುವಂತೆ ಮಾಡಿತು. ಹಾಗೆ ಈ ನಾಲ್ವರು ಜೈಲಿನ ಹೊರಗಡೆ ಇದ್ದ ಪಿಟ್ಟಿ ನಾಗೇಶ್‌ನ ಅಣ್ಣನ ಮಗನಾದ ರಾಘವೇಂದ್ರ ಮೂಲಕ ಪಿಟ್ಟಿ ನಾಗೇಶ್‌ನನ್ನು ಸಂಪರ್ಕಿಸಿ ಕೊಲೆ ಸಂಚನ್ನು ತಿಳಿಸಿದ್ದರು.
ಕೊಲೆಯತ್ನ ನಡೆಸಿದ ಶೆಟ್ಟಿಗಾರ್ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ ಪಿಟ್ಟಿ ನಾಗೇಶ್, ಈ ನಾಲ್ವರಿಗೆ ಕೊಲೆ ಮಾಡಲು ಆಯುಧ ಹಾಗೂ ಕೇಸಿನ ಖರ್ಚಿಗೆ ಹಣ ನೀಡುವುದಾಗಿ ಭರವಸೆ ನೀಡಿದ್ದನು. 2011ರ ಜ.13 ರಂದು ಪ್ರಕರಣವೊಂದರ ವಿಚಾರಣೆಗೆ ಕಾರ್ಕಳ ನ್ಯಾಯಾಲಯಕ್ಕೆ ಆಗಮಿಸಿದ್ದ ಮುತ್ತಪ್ಪಗೆ ಸಿಗುವಂತೆ ನ್ಯಾಯಾಲದ ಶೌಚಾಲಯದೊಳಗೆ ಮೂರು ಚೂರಿ ಗಳನ್ನು ರಾಘವೇಂದ್ರ ಇರಿಸಿದ್ದನು. ಅದನ್ನು ಪಡೆದುಕೊಂಡ ಮುತ್ತಪ್ಪ ಚೂರಿಗಳನ್ನು ಹಿರಿಯಡ್ಕ ಜೈಲಿನಲ್ಲಿ ಬಚ್ಚಿಟ್ಟಿದ್ದನು.
ಮರುದಿನ ಜ.14ರಂದು ಬೆಳಗ್ಗೆ 8.15ರ ಸುಮಾರಿಗೆ ನಾಲ್ವರು ಆರೋಪಿ ಗಳು ಸೇರಿ ಜೈಲಿನ ಬ್ಯಾರಕಿನ ಹೊರಗಡೆ ಕುಳಿತಿದ್ದ ವಿನೋದ್ ಶೆಟ್ಟಿಗಾರ್ ಮೇಲೆ ದಾಳಿ ನಡೆಸಿ ಚೂರಿಯಿಂದ ಬರ್ಬರವಾಗಿ ಕೊಲೆ ಮಾಡಿದ್ದರು. ಅಲ್ಲದೆ ಆರೋಪಿಗಳು ತಡೆಯಲು ಬಂದ ಜೈಲು ಗಾರ್ಡ್‌ಗಳಿಗೆ ಚೂರಿಯಿಂದ ತಿವಿದು ಗಾಯಗೊಳಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಕಲಂ 202, 120(ಬಿ), 109, ಸಹ ಕಲಂ 34 ಭಾರತೀಯ ದಂಡ ಸಂಹಿತೆ ಪ್ರಕಾರ ಪ್ರಕರಣ ದಾಖಲಾಗಿತ್ತು.
48 ಸಾಕ್ಷಿಗಳಲ್ಲಿ 35 ಮಂದಿಯಿಂದ ಸಾಕ್ಷ
ಪ್ರಕರಣದ ತನಿಖೆ ನಡೆಸಿದ ಆಗಿನ ಬ್ರಹ್ಮಾವರ ವೃತ್ತ ನಿರೀಕ್ಷಕ ಕೃಷ್ಣಮೂರ್ತಿ ಪಿಟ್ಟಿ ನಾಗೇಶ್ ಹಾಗೂ ರಾಘವೇಂದ್ರನನ್ನು ಬಂಧಿಸಿದ್ದರು. ಆರೋಪಿಗಳ ವಿರುದ್ಧ 2011ರ ಎ.18ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಯನ್ನು ಸಲ್ಲಿಸಲಾಗಿತ್ತು. ನ್ಯಾಯಾಲಯವು ಒಟ್ಟು 48 ಸಾಕ್ಷಿಗಳ ಪೈಕಿ 35 ಮಂದಿಯನ್ನು ವಿಚಾರಣೆಗೆ ಒಳಪಡಿಸಿತ್ತು. ಪ್ರಕರಣದ ಐದು ಆರೋಪಿಗಳ ಪೈಕಿ ನಾಲ್ವರು ದೋಷಿಗಳೆಂದು ನ್ಯಾಯಾಧೀಶ ಚಂದ್ರೇಖರ್ ಎಂ.ಜೋಶಿ ತೀರ್ಪು ನೀಡಿದರು.
ಈ ಪ್ರಕರಣದ ಆರು ಮಂದಿ ಆರೋಪಿಗಳ ಪೈಕಿ ಮುತ್ತಪ್ಪ, ರಿಯಾಝ್, ಶರಣಪ್ಪ ಧಾರವಾಡ ಜೈಲಿನಲ್ಲಿ ಮತ್ತು ನಾಗರಾಜ್ ಜಾಮೀನು ಸಿಗದೆ ಬೆಳ ಗಾವಿ ಜೈಲಿನಲ್ಲಿದ್ದಾರೆ. ರಾಘವೇಂದ್ರ ಮತ್ತು ಪಿಟ್ಟಿ ನಾಗೇಶ್ ಜಾಮೀನಿನಿಂದ ಹೊರ ಬಂದಿದ್ದರು. ಸರಕಾರದ ಪರವಾಗಿ ಜಿಲ್ಲಾ ಸರಾರಿ ಅಭಿಯೋಜಕಿ ಶಾಂತಿಬಾಯಿ ವಾದಿಸಿದ್ದರು.
ಶೆಟ್ಟಿಗಾರ್ ಕೊಲೆಗೆ ಪ್ರತಿಕಾರವಾಗಿ ಪಿಟ್ಟಿ ಹತ್ಯೆ
ವಿನೋದ್ ಶೆಟ್ಟಿಗಾರ್ ಕೊಲೆಗೆ ಪ್ರತೀಕಾರವಾಗಿ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ ಪಿಟ್ಟಿ ನಾಗೇಶ್‌ನನ್ನು ಶೆಟ್ಟಿಗಾರ್ ಸಹಚರರಾದ ಐವನ್ ರಿಚರ್ಡ್ ಯಾನೆ ಮುನ್ನ, ಗುರುಪ್ರಸಾದ್ ಶೆಟ್ಟಿ, ಸಂತೋಷ ಪೂಜಾರಿ, ವಿಶ್ವನಾಥ ಶೆಟ್ಟಿ, ಝಾಕಿರ್ ಹುಸೈನ್ ಎಂಬವರು 2014ರ ಸೆ.11ರಂದು ರಾತ್ರಿ ಉದ್ಯಾವರ ಬಳಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಪಿಟ್ಟಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ನಾಲ್ಕು ಕೊಲೆ ಸೇರಿದಂತೆ ಒಟ್ಟು 22 ಪ್ರಕರಣಗಳು ದಾಖಲಾಗಿದ್ದವು.