×
Ad

ಮೆಸ್ಕಾಂ ರೈತರ ಜೊತೆ ಚೆಲ್ಲಾಟವಾಡುತ್ತಿದೆ-ರೈತ ಮುಖಂಡರ ಆಕ್ರೋಶ

Update: 2019-03-27 23:49 IST

ಪುತ್ತೂರು: ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ವಿದ್ಯುತ್  ಸಮಸ್ಯೆಯಿಂದಾಗಿ ಕೃಷಿಕರು ತೊಂದರೆಗೊಳಗಾಗಿದ್ದಾರೆ, ಕೃಷಿ ಚಟುವಟಿಕೆ ನೀರಿಲ್ಲದೆ ಒಣಗಿ ಹೋಗುತ್ತಿದೆ ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಲ್ಲಿ ಪ್ರಶ್ನಿಸಿದರೆ ಉಡಾಫೆಯ ಉತ್ತರವನ್ನು ನೀಡುತ್ತಾರೆ ಎಂದು ಆರೋಪಿಸಿ ಜಿಲ್ಲಾ ರೈತ ಸಂಘ ಹಸಿರು ಸೇನೆ ಈಶ್ವರಮಂಗಲ ವಲಯ ವತಿಯಿಂದ ಕುಂಬ್ರ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಬುಧವಾರ ಧರಣಿ ನಡೆಸಲಾಯಿತು. 

ಮೆಸ್ಕಾಂ ಕುಂಬ್ರ ಕಚೇರಿಯ ಬಾಗಿಲಲ್ಲಿ ಧರಣಿ ಕುಳಿತ ರೈತ ಮುಖಂಡರು ಮೆಸ್ಕಾಂ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು. ಸಮರ್ಪಕವಾಗಿ ಕೆಲಸ ಮಾಡದ ಅಧಿಕಾರಿಗಳನ್ನು ಸಂಸ್ಥೆಯಿಂದ ವಜಾಗೊಳಿಸಿ ಎಂದು ಆಗ್ರಹಿಸಿದ ಧರಣಿ ನಿರತರು ವಾರದೊಳಗೆ ರೈತರ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಅವರು ಮೆಸ್ಕಾಂ ಅಧಿಕಾರಿಗಳು ದಿನದಲ್ಲಿ 6 ಗಂಟೆ ತ್ರೀಫೇಸ್ ವಿದ್ಯುತ್ ಪೂರೈಕೆ ಮಡುತ್ತಿರುವುದಾಗಿ ಹೇಳುತ್ತಾರೆ. ಆದರೆ ಸರಿಯಾಗಿ ವಿದ್ಯುತ್ ಸರಿಯಾಗಿ ಸರಬರಾಜು ಮಾಡುತ್ತಿಲ್ಲ. ವೋಲ್ಟೇಜ್ ಸಮಸ್ಯೆಯಿಂದಾಗಿ ಕೃಷಿ ತೋಟಗಳಿಗೆ ನೀರಿಗೆ ತೊಂದರೆಯಾಗುತ್ತಿದೆ. ಅಡಕೆ ತೋಟಗಳು ಒಣಗಿ ಹೋಗಿದೆ ಮೆಸ್ಕಾಂ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಮಸ್ಯೆ ಉಲ್ಭಣವಾಗುತ್ತಿದೆ, ವಿದ್ಯುತ್ ಇದ್ದರೂ ಅದನ್ನು ಸಮರ್ಪಕವಾಗಿ ವಿತರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಕೋಶಾಧಿಕಾರಿ ಇಬ್ರಾಹಿಂ ಖಲೀಲ್, ಪುತ್ತೂರು ಘಟಕದ ಅಧ್ಯಕ್ಷ ಬಾಲ ಸುಬ್ರಹ್ಮಣ್ಯ ಹೊಳ್ಳ, ತಾಲೂಕು ಕಾರ್ಯದರ್ಶಿ ರತ್ನಕುಮಾರ್ ಕೆ, ವಲಯ ಉಪಾಧ್ಯಕ್ಷ ಪ್ರವೀಣ್‍ಕುಮಾರ್ ರೈ, ವಲಯ ಕೋಶಾಧಿಕಾರಿ ನಾಗರಾಜ್ ಭಟ್, ರೈತ ಪ್ರಮುಖರಾದ ಪ್ರದೀಪ್ ರೈ, ನಿತಿನ್‍ಪ್ರಸಾದ್ ಹೆಗ್ಡೆ, ಮುರಳಿ ಭಟ್, ಗಣೇಶ್ ನಾಯಕ್, ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಮಾದವ ನಾಯಕ್ ಸುಳ್ಯಪದವು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News