ಉಳ್ಳಾಲ: ತಾಯಿ ನಿಧನ ಹೊಂದಿದರೂ ಎಸೆಸೆಲ್ಸಿ ಪರೀಕ್ಷೆ ಬರೆದ ಪುತ್ರಿ
ಉಳ್ಳಾಲ: ತಾಯಿ ನಿಧನ ಹೊಂದಿದರೂ ಮಗಳು ಪರೀಕ್ಷೆಯನ್ನು ಬರೆದು ಸಮಾಜಕ್ಕೆ ಮಾದರಿಯಾದ ಘಟನೆ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಸರಕಾರಿ ಪ್ರೌಢಶಾಲೆ ಮೊಂಟೆಪದವಿನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಅಲ್ ಮದೀನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಶೈಬಾ ತನ್ನ ತಾಯಿಯ ನಿಧನದ ದುಃಖದ ನಡುವೆಯೂ ಬುಧವಾರ ಪರೀಕ್ಷೆ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
ನರಿಂಗಾನ ಗ್ರಾಮದ ಕೊಡಂಚಿಲ್ ಅಬ್ಬಾಸ್ ಹಾಗೂ ಸೆಫಿಯಾ ದಂಪತಿ ಪುತ್ರಿ ಶೈಬಾ ಇಂತಹ ಧೈರ್ಯ ತೋರಿರುವುದು ನಿಜಕ್ಕೂ ಶ್ಲಾಘನೀಯ. ಶೈಬಾ ತಾಯಿ ಸೆಫಿಯಾ ಅವರಿಗೆ ಕೆಲವು ದಿನಗಳಿಂದ ಅರೋಗ್ಯದಲ್ಲಿ ವ್ಯತ್ಯಯವಾಗಿದ್ದು ಮಂಗಳವಾರ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾದರು.
ಶೈಬಾಳ ದುಃಖದ ಕಟ್ಟೆ ಒಡೆದಿದ್ದರೂ ಪರೀಕ್ಷೆಯನ್ನು ಬರೆಯಲು, ಕುಟುಂಬಸ್ಥರು ಧೈರ್ಯ ನೀಡಿದ್ದರು. ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶೇಷ ಮುತುವರ್ಜಿಯಿಂದ ವಿದ್ಯಾರ್ಥಿನಿ ಶೈಬಾ ಪರೀಕ್ಷಾ ಕೇಂದ್ರವಾಗಿರುವ ಮೊಂಟೆಪದವಿನ ಸರಕಾರಿ ಪ್ರೌಢಶಾಲೆಯ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು ಹಾಗೂ ಶಿಕ್ಷಕರು ವಿದ್ಯಾರ್ಥಿನಿಗೆ ಮಾನಸಿಕವಾಗಿ ಧೈರ್ಯ ತುಂಬಿ ಪೂರಕ ವಾತಾವರಣ ಸೃಷ್ಟಿಸಲು ಸಹಕಾರ ನೀಡಿದ್ದಾರೆ. ಪರೀಕ್ಷೆ ಬರೆಯಲು ಮಾನಸಿಕವಾಗಿ ದೃಢತೆಗೆ ವಿಶೇಷ ವ್ಯವಸ್ಥೆ ಮಾಡಿದ ಇಲಾಖೆಗೆ, ಉಪ ಪ್ರಾಂಶುಪಾಲ ಸಂತೋಷ್ ಟಿ.ಎನ್. ಸೇರಿದಂತೆ ಸಹಕರಿಸಿದ ಎಲ್ಲರಿಗೂ ಕುಟುಂಬ ಧನ್ಯವಾದ ಸಲ್ಲಿಸಿದೆ.