ಈ ಸರ್ಜಿಕಲ್ ಸ್ಟ್ರೈಕ್ ಚುನಾವಣಾ ವಿಷಯವಾಗಲಿ

Update: 2019-03-28 06:04 GMT

ಲೋಕಸಭಾ ಚುನಾವಣೆ ನಿಧಾನಕ್ಕೆ ಕಳೆಗಟ್ಟುತ್ತಿದೆ. ಆದರೆ ರಾಜಕಾರಣಿಗಳ ಭಾಷಣಗಳ ವರಸೆಗಳನ್ನು ನೋಡಿದಾಗ ಮಾತ್ರ ನಿರಾಸೆ ಕಾಡುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಆರ್ಥಿಕತೆ ಹಿಂದಕ್ಕೆ ಚಲಿಸಿದೆ. ಉದ್ಯೋಗಗಳು ನೆಲಕಚ್ಚಿವೆ. ನಿರುದ್ಯೋಗಗಳ ಸಂಖ್ಯೆ ಹೆಚ್ಚಿವೆ. ಈ ಚುನಾವಣೆಯ ಪ್ರಮುಖ ವಿಷಯವೇ, ಭಾರತವನ್ನು ಮರು ನಿರ್ಮಿಸುವ ‘ಅಭಿವೃದ್ಧಿ ಮತ್ತು ಉದ್ಯೋಗ’ವಾಗಬೇಕಾಗಿತ್ತು. ಕಳೆದ ಲೋಕಸಭಾ ಚುನಾವಣೆಯನ್ನು ನರೇಂದ್ರ ಮೋದಿಯವರು ಗೆದ್ದಿರುವುದೂ ಅಭಿವೃದ್ಧಿಯ ಹೆಸರಿನಲ್ಲೇ. ದೇಶದಲ್ಲಿ ಭ್ರಷ್ಟಾಚಾರ ನಿವಾರಣೆ ಮಾಡಿ, ಕಪ್ಪು ಹಣವನ್ನು ಭಾರತಕ್ಕೆ ತರಲಿದ್ದೇನೆ ಎನ್ನುವ ಘೋಷಣೆ ಕಳೆದ ಚುನಾವಣೆಯ ಪ್ರಧಾನ ಆಕರ್ಷಣೆಯಾಗಿತ್ತು. ಅಂದಿನ ಘೋಷಣೆಗಳೇ ಸದ್ಯದ ಲೋಕಸಭಾ ಚುನಾವಣೆಯ ದಾರಿಯಲ್ಲಿ ಬಿದ್ದ ಮುಳ್ಳುಗಳಾಗಿ ಮೋದಿಯನ್ನು ಕಾಡುತ್ತಿವೆ. ಈ ಕಾರಣದಿಂದಲೇ, ಈ ಬಾರಿಯ ಚುನಾವಣೆಯನ್ನು ಮೋದಿಯವರು ಭಾವನಾತ್ಮಕ ವಿಷಯವಾಗಿ ಪರಿವರ್ತಿಸಿದರು. ಅಭಿವೃದ್ಧಿ, ಉದ್ಯೋಗ, ಕೃಷಿ ಇತ್ಯಾದಿಗಳು ಈ ಚುನಾವಣೆಯಲ್ಲಿ ಚರ್ಚೆಯಾಗದಿರಲಿ ಎನ್ನುವಂತೆ ಪುಲ್ವಾಮದಲ್ಲಿ ಸೈನಿಕರ ಮೇಲೆ ಬರ್ಬರ ದಾಳಿ ನಡೆಯಿತು. ಇದಾದ ಬಳಿಕ ಎರಡನೇ ಸರ್ಜಿಕಲ್ ಸ್ಟ್ರೈಕ್ ಭಾಗ್ಯವನ್ನು ನರೇಂದ್ರಮೋದಿಯವರು ದೇಶದ ಜನರಿಗೆ ನೀಡಿದರು. ಇಂದು ನರೇಂದ್ರ ಮೋದಿಯವರು ಚುನಾವಣೆಯನ್ನು ಎದುರಿಸುತ್ತಿರುವುದೇ ಈ ಸರ್ಜಿಕಲ್‌ಸ್ಟ್ರೈಕ್‌ನ ಹೆಸರಿನಲ್ಲಿ. ಒಂದೆಡೆ ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್ ಘೋಷಣೆಯನ್ನು ಮಾಡಿದ ಬೆನ್ನಿಗೇ ವಿರೋಧ ಪಕ್ಷಗಳು ಅದು ನಡೆದಿರುವುದಕ್ಕೆ ಸಾಕ್ಷಗಳನ್ನು ಕೇಳ ತೊಡಗಿದವು.

‘ಸಾಕ್ಷ ಕೇಳುವುದು ಸೈನಿಕರಿಗೆ ಮಾಡುವ ಅವಮಾನ’ ಎಂದು ಬಿಜೆಪಿ ಅದನ್ನೇ ತನಗೆ ಪೂರಕವಾಗಿ ಬಳಸಲು ಹೊರಟಿತು. ಈ ಗದ್ದಲದಲ್ಲಿ ಜನರ ನಿಜವಾದ ಸಮಸ್ಯೆ ಬದಿಗೆ ಸರಿಯಿತು. ಕಳೆದ ನಾಲ್ಕು ವರ್ಷಗಳಲ್ಲಿ ಮೋದಿಯ ಸಾಧನೆಗಳು ಏನು ಎಂದು ಕೇಳಿದರೆ ಬಿಜೆಪಿಯ ಬಳಿಯಲ್ಲಿ ಸ್ಪಷ್ಟ ಉತ್ತರವಿಲ್ಲ. ನೋಟುನಿಷೇಧದಿಂದ ದೇಶಕ್ಕೆ ಒಳಿತಾಯಿತು ಎಂದು ಬಿಜೆಪಿ ಹೇಳುತ್ತಿದೆ. ಹಾಗಾದರೆ ನೋಟು ನಿಷೇಧವನ್ನು ಮುಂದಿಟ್ಟು ಯಾಕೆ ಮತ ಯಾಚಿಸುತ್ತಿಲ್ಲ? ಜಿಎಸ್‌ಟಿ, ಜಾನುವಾರು ವ್ಯಾಪಾರಕ್ಕೆ ನಿಯಂತ್ರಣ, ಗೋಶಾಲೆಗಳು, ಡಿಜಿಟಲೀಕರಣ ಇವೆಲ್ಲವೂ ಮೋದಿ ಸರಕಾರದ ಸಾಧನೆಗಳೇ ಆಗಿದ್ದರೆ, ಮುಂದಿನ ಚುನಾವಣೆಯಲ್ಲಿ ಆ ಸಾಧನೆಗಳು ಬಿಜೆಪಿಯ ಗೆಲುವಿಗೆ ಕಾರಣವಾಗಬೇಕು. ಅದು ಬಿಟ್ಟು, ಸೇನೆಯ ಹೆಸರಿನಲ್ಲಿ ಮತ ಯಾಚಿಸುವ ದೈನೇಸಿ ಸ್ಥಿತಿ ಬಿಜೆಪಿಗೆ ಯಾಕೆ ಬಂತು? ಇಷ್ಟಕ್ಕೂ ಸೇನೆಗಾಗಿ ನರೇಂದ್ರ ಮೋದಿ ಸರಕಾರ ಏನು ಮಾಡಿದೆ? ಎನ್ನುವ ವಿವರವನ್ನಾದರೂ ಕೊಡಬೇಕು. ಸೇನೆಯ ಮೂಲಭೂತ ಆವಶ್ಯಕತೆಗಳನ್ನು ಈಡೇರಿಸಲು ಬೇಕಾದ ಹಣ ಒದಗಿಸುವುದಕ್ಕೆ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ವರದಿಗಳು ಹೇಳುತ್ತವೆ. ಮೋದಿ ಸರಕಾರದ ಅವಧಿಯಲ್ಲೇ, ಸೈನಿಕರು ತಮ್ಮ ಅಸಹಾಯಕತೆಯನ್ನು ವೀಡಿಯೊ ಮೂಲಕ ದೇಶದ ಜನರ ಮುಂದೆ ಹಂಚಿಕೊಂಡರು.

ಆಹಾರ, ಉಡುಪು, ಅತ್ಯಾಧುನಿಕ ಸಲಕರಣೆಗಳು ಇತ್ಯಾದಿಗಳನ್ನು ಪೂರೈಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ವಿಪರ್ಯಾಸವೆಂದರೆ, ಈ ನಾಲ್ಕು ವರ್ಷಗಳಲ್ಲಿ ಸೈನಿಕರ ಮೇಲೆ ಅತ್ಯಧಿಕ ಉಗ್ರರ ದಾಳಿ ನಡೆಯಿತು. ಉರಿ ದಾಳಿಯ ಬಳಿಕ ನಮ್ಮ ಸೇನೆಯ ಮೇಲೆ ನಡೆದ ಪುಲ್ವಾಮ ದಾಳಿಯಲ್ಲಿ 40ಕ್ಕೂ ಅಧಿಕ ಸೈನಿಕರು ಸಾವಿಗೀಡಾದರು. ಅತಿ ಹೆಚ್ಚು ಸೈನಿಕರು ಉಗ್ರರ ದಾಳಿಯಿಂದ ಮೃತಪಟ್ಟಿರುವುದು ಮೋದಿ ಸರಕಾರದ ಅವಧಿಯಲ್ಲಿ. ಈ ವೈಫಲ್ಯವನ್ನು ಮೋದಿಯು ರಹಸ್ಯವಾಗಿ ನಡೆಸಿದರೆನ್ನಲಾಗಿರುವ ಸರ್ಜಿಕಲ್ ಸ್ಟ್ರೈಕ್ ಹೇಗೆ ಸರಿಪಡಿಸುತ್ತದೆ? ಸರ್ಜಿಕಲ್ ಸ್ಟ್ರೈಕ್‌ನಿಂದ ಈ ದೇಶಕ್ಕೆ ಆದ ಲಾಭವೇನು ಎನ್ನುವುದನ್ನಾದರೂ ಮೋದಿಯವರು ಸ್ಪಷ್ಟಪಡಿಸಬೇಕಾಗಿದೆ. ಮುನ್ನೂರಲ್ಲ, ಮೂರು ಸಾವಿರ ಉಗ್ರರನ್ನೇ ನಾಶ ಪಡಿಸಿದ್ದೇವೆಂದು ಹೇಳಿಕೊಳ್ಳಲಿ, ಆದರೆ ಉಗ್ರರ ದಾಳಿಯಾದ ಬಳಿಕವೂ ಸೇನೆಯ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ ಎಂದ ಮೇಲೆ, ಮೋದಿಯ ಸರ್ಜಿಕಲ್ ಸ್ಟ್ರೈಕ್ ಒಂದು ವಿಫಲ ಪ್ರಹಸನವೆಂದೇ ಹೇಳಬೇಕಾಗುತ್ತದೆ. ಮೋದಿಯ ಆಡಳಿತದಲ್ಲಿ ಸೇನೆಯ ಮೇಲೆ ನಡೆಯುತ್ತಿರುವ ದಾಳಿ ನಿಂತಿಲ್ಲ ಎಂದ ಮೇಲೆ, ಸೇನೆಯ ಹೆಸರಿನಲ್ಲಿಯಾದರೂ ಮತ ಯಾಚಿಸಲು ಮೋದಿ ಸರಕಾರಕ್ಕೆ ನೈತಿಕ ಅರ್ಹತೆಯಿದೆಯೇ? ಇಂದು ನರೇಂದ್ರ ಮೋದಿಯವರು ಪುಲ್ವಾಮದಲ್ಲಿ ಸೇನೆಯ ಮೇಲೆ ನಡೆದ ದಾಳಿ, ಅದರ ಹಿಂದಿರುವ ಭದ್ರತಾ ವೈಫಲ್ಯಗಳ ಕುರಿತಂತೆ ಉತ್ತರಿಸಬೇಕು. ಭದ್ರತಾ ವ್ಯವಸ್ಥೆಯ ಬೇಜವಾಬ್ದಾರಿಗೆ ಪ್ರಾಣ ತೆತ್ತ ಸೈನಿಕರ ಕುಟುಂಬದ ಮುಂದೆ ಮೋದಿ ಸರಕಾರ ಕ್ಷಮೆ ಯಾಚಿಸಬೇಕು.

 ಮೋದಿ ಉತ್ತರಿಸಬೇಕಾದುದು ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್‌ನ ಕುರಿತಂತೆ ಅಲ್ಲ. ನೋಟು ನಿಷೇಧವೆಂಬ ಸರ್ಜಿಕಲ್ ಸ್ಟ್ರೈಕ್‌ನ ದುಷ್ಪರಿಣಾಮಗಳಿಗೆ ಈ ಚುನಾವಣೆಯಲ್ಲಿ ಸ್ಪಷ್ಟೀಕರಣ ನೀಡಬೇಕು. ನೋಟು ನಿಷೇಧದಿಂದ ಕಪ್ಪು ಹಣ ನಿಷೇಧವಾಗುತ್ತದೆ ಎಂದು ಹೇಳಿದರು. ಕಾಶ್ಮೀರದಲ್ಲಿ ಹಿಂಸಾಚಾರ ನಿಲ್ಲುತ್ತದೆ, ಆರ್ಥಿಕತೆ ಮೇಲೆದ್ದು ನಿಲ್ಲುತ್ತದೆ ಇತ್ಯಾದಿ ಭರವಸೆಗಳನ್ನು ನೀಡುತ್ತಾ ಹೋದರು. ಆದರೆ ಕಪ್ಪು ಹಣ ಬರಲಿಲ್ಲ. ಕಾಶ್ಮೀರದಲ್ಲಿ ಹಿಂಸಾಚಾರ ನಿಲ್ಲಲಿಲ್ಲ, ಬದಲಾಗಿ ಉಗ್ರರು 40 ಯೋಧರನ್ನೇ ಬಲಿತೆಗೆಯುವ ಮಟ್ಟಿಗೆ ಪರಿಸ್ಥಿತಿ ವಿಷಮಗೊಂಡಿತು. ರೂಪಾಯಿ ಬೆಲೆಯೂ ಹೆಚ್ಚಲಿಲ್ಲ. ನೋಟು ನಿಷೇಧದಿಂದ ಗ್ರಾಮೀಣ ಉದ್ಯಮಗಳು ನೆಲಕಚ್ಚಿದವು. ರೈತರು ತೀವ್ರ ಸಂಕಷ್ಟಕ್ಕೆ ಈಡಾದರು. ಬ್ಯಾಂಕುಗಳು ಶ್ರೀಸಾಮಾನ್ಯರನ್ನು ಹಾಡಹಗಲೇ ದೋಚಿದವು. ನೋಟು ನಿಷೇಧ ಮಾಡಿದ ಬೆನ್ನಿಗೇ ‘‘ನನಗೆ 50 ದಿನ ಕೊಡಿ. ಎಲ್ಲ ಸರಿಯಾಗದಿದ್ದರೆ ಕೊಂದು ಹಾಕಿ’’ ಎಂದು ಮೋದಿ ಹೇಳಿದರು. ಆದರೆ ಯಾವುದೂ ಸರಿಯಾಗಲಿಲ್ಲ. ದೇಶಕ್ಕಾದ ಹಾನಿಗೆ ಸಂಬಂಧಿಸಿ ಕನಿಷ್ಠ ಕ್ಷಮೆಯಾಚನೆಯನ್ನೂ ಮಾಡಲಿಲ್ಲ. ಈ ಚುನಾವಣೆಯಲ್ಲಾದರೂ, ನರೇಂದ್ರ ಮೋದಿಯವರು ನೋಟು ನಿಷೇಧದಿಂದ ದೇಶಕ್ಕಾದ ಲಾಭದ ಅಂಕಿಅಂಶಗಳನ್ನು ಮುಂದಿಡಬೇಕಾಗಿದೆ.

ಎಷ್ಟು ಶ್ರೀಮಂತರು ಕಪ್ಪು ಹಣ ಬಹಿರಂಗವಾದುದರಿಂದ ಬೀದಿಗೆ ಬಿದ್ದರು ಎನ್ನುವುದರ ಲೆಕ್ಕವನ್ನು ನೀಡಬೇಕಾಗಿದೆ. ನಮ್ಮ ರೂಪಾಯಿಗೆ ಇದರಿಂದ ಆದ ಲಾಭವೇನು? ಎನ್ನುವುದನ್ನು ಸ್ಪಷ್ಟಪಡಿಸಬೇಕು. ಇವೆಲ್ಲವುಗಳಿಗೆ ಉತ್ತರಿಸಲು ಸಾಧ್ಯವಾಗದ ಕಾರಣಕ್ಕಾಗಿಯೇ ಮೋದಿಯವರು ವಿಷಯಾಂತರ ಮಾಡುತ್ತಿದ್ದಾರೆ. ಗಡಿಯ ಕಡೆಗೆ, ಆಕಾಶದ ಕಡೆಗೆ ಕೈ ತೋರಿಸಿ ಮತ್ತೊಮ್ಮೆ ಜನರನ್ನು ಯಾಮಾರಿಸಲು ಯತ್ನಿಸುತ್ತಿದ್ದಾರೆ. ವಿರೋಧ ಪಕ್ಷಗಳು ಮೋದಿಯ ಚಾಲಾಕಿತನಕ್ಕೆ ಬಲಿಯಾಗದೆ, ಜನರು ಮತ್ತೆ ಅಭಿವೃದ್ಧಿಯ ಕುರಿತಂತೆ ಪ್ರಶ್ನೆಗಳನ್ನೆತ್ತುವಂತೆ ಮಾಡಬೇಕು. ಮೋದಿಯ ಸರ್ಜಿಕಲ್ ಸ್ಟ್ರೈಕ್‌ಗೆ ಮುರಿದು ಬಿದ್ದಿರುವ ಜನಸಾಮಾನ್ಯರ ಬದುಕೇ ಈ ಬಾರಿಯ ಚುನಾವಣೆಯ ಮುಖ್ಯ ವಿಷಯವಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News