×
Ad

ಉಡುಪಿ: ಸ್ವತಂತ್ರ ಅಭ್ಯರ್ಥಿ ಅಮೃತ್ ಶೆಣೈಯಿಂದ ಚುನಾವಣಾ ದೇಣಿಗೆ ಸಂಗ್ರಹ

Update: 2019-03-28 18:53 IST

ಉಡುಪಿ, ಮಾ.28: ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ವಿರೋಧಿಸಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿ ಯಾಗಿ ಸ್ಪರ್ಧಿಸುತ್ತಿರುವ ಅಮೃತ್ ಶೆಣೈ ಗುರುವಾರ ಉಡುಪಿ ನಗರದಲ್ಲಿ ಪಾದಯಾತ್ರೆಯ ಮೂಲಕ ಸಾರ್ವಜನಿಕರಿಂದ ಚುನಾವಣಾ ದೇಣಿಗೆಯನ್ನು ಸಂಗ್ರಹಿಸಿದರು.

ಉಡುಪಿ ಜೋಡುಕಟ್ಟೆಯಿಂದ ಅಮೃತ್ ಶೆಣೈ ಹಾಗೂ ಅವರ ಬೆಂಬಲಿಗರು ಪೆಟ್ಟಿಗೆ ಹಿಡಿದುಕೊಂಡು ಕೋರ್ಟ್ ರಸ್ತೆ, ಕೆ.ಎಂ.ಮಾರ್ಗ, ಸರ್ವಿಸ್ ಬಸ್, ಸಿಟಿ ಬಸ್ ನಿಲ್ದಾಣ ಸೇರಿದಂತೆ ನಗರದಲ್ಲಿರುವ ರಿಕ್ಷಾ ನಿಲ್ದಾಣ, ಹೊಟೇಲು, ಅಂಗಡಿಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಮೃತ್ ಶೆಣೈ, ಎಲ್ಲರು ಸ್ವಾರ್ಥಕ್ಕಾಗಿ ಬಂಡಾಯ ಹೋಗುವುದು ಸಾಮಾನ್ಯ. ಆದರೆ ನಾನು ನನ್ನ ರಾಜಕೀಯ ಭವಿಷ್ಯವನ್ನು ಕೂಡ ಪರಿಗಣಿಸದೆ, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾಂಗ್ರೆಸ್ ಹೈಕಮಾಂಡ್‍ಗೆ ಸ್ಪಷ್ಟ ಸಂದೇಶ ನೀಡುವ ಉದ್ದೇಶದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು.

ಚುನಾವಣಾ ಆಯೋಗ 70ಲಕ್ಷ ರೂ.ವರೆಗೆ ವೆಚ್ಚ ಮಾಡಲು ಅವಕಾಶ ನೀಡಿದೆ. ಪ್ರಯಾಣ, ವಾಹನ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಾಕಷ್ಟು ಖರ್ಚು ಗಳಿವೆ. ಆ ಖರ್ಚನ್ನು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಮೂಲಕ ಭರಿಸತ್ತೇನೆ. ಇದು ದೇಣಿಗೆ ಅಲ್ಲ ಜನರ ಭಾಗವಹಿಸುವಿಕೆಯಾಗಿದೆ. ನೀವು ಹಣ ಕೊಡಿ, ನನ್ನನ್ನು ಸಂಸದನ್ನಾಗಿ ಮಾಡಿ, ನಾನು ನಿಮ್ಮ ಸೇವೆ ಮಾಡುತ್ತೇನೆ ಎಂಬ ಹೊಸ ಪರಿಕಲ್ಪನೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ ಎಂದರು.

ಮನೋ ವೈದ್ಯ ಡಾ.ಪಿ.ಭಂಡಾರಿ ಮಾತನಾಡಿ, ಇಂದಿನ ಜನಪ್ರತಿನಿಧಿಗಳು ಚುನಾವಣೆ ಮುಗಿದ ನಂತರ ಸಾಮಾನ್ಯ ಜನರತ್ತ ತಿರುಗಿಯೂ ನೋಡಲ್ಲ. ಆದುದರಿಂದ ನಮಗೆ ಸಾರ್ವಜನಿಕರ ಸೇವೆ ಮಾಡುತ್ತಿರುವ ಇಂತಹ ಅಭ್ಯರ್ಥಿ ಗಳು ಬೇಕು. ನಾವೆಲ್ಲ ಸ್ವಇಚ್ಛೆಯಿಂದ ದೇಣಿಗೆ ನೀಡುತ್ತಿದ್ದೇವೆ. ಅದೇ ರೀತಿ ಸಾರ್ವಜನಿಕರು ಕೂಡ ಸ್ವಇಚ್ಛೆಯಿಂದ ದೇಣಿಗೆ ನೀಡಬೇಕು. ಇದೊಂದು ಹೊಸ ರೀತಿಯ ಕಾರ್ಯಕ್ರಮಕ್ಕೆ ನಾವು ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತರಾದ ಜಯಶ್ರೀ ಭಟ್, ಯೋಗೀಶ್ ಶೇಟ್, ಕಿಶೋರ್ ಶೆಟ್ಟಿ, ಅನಿತಾ ಡಿಸೋಜ, ಅಲೆನ್ ರೋಹನ್ ವಾಜ್, ಯಜ್ಞೇಶ್ ಆಚಾರ್ಯ, ಅಹಮದ್ ನೇಜಾರು, ರಫೀಕ್ ಕಲ್ಯಾಣಪುರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News