ಈ ದೇಶದಲ್ಲಿ ಸಲಿಂಗ ಕಾಮ, ವ್ಯಭಿಚಾರಕ್ಕೆ ಇನ್ನು ‘ಕಲ್ಲು ಹೊಡೆದು ಕೊಲ್ಲುವ’ ಶಿಕ್ಷೆ

Update: 2019-03-28 16:08 GMT

ವಾಶ, ಮಾ. 28: ಆಗ್ನೇಯ ಏಶ್ಯದಲ್ಲಿರುವ ರಾಜಾಡಳಿತದ ಸಣ್ಣ ದೇಶ ಬ್ರೂನೈಯಲ್ಲಿ ಇನ್ನು ಮುಂದೆ ಸಲಿಂಗ ಕಾಮ ಮತ್ತು ವ್ಯಭಿಚಾರವನ್ನು ಕಲ್ಲು ಹೊಡೆದು ಸಾಯಿಸುವ ಅಪರಾಧವನ್ನಾಗಿ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದ ನೂತನ ಕಾನೂನು ಎಪ್ರಿಲ್ 3ರಿಂದ ಜಾರಿಗೆ ಬರಲಿದೆ.

ಇನ್ನು ಮುಂದೆ ಈ ಅಪರಾಧಗಳನ್ನು ಎಸಗಿರುವುದು ಸಾಬೀತಾದರೆ, ಅಂಥವರನ್ನು ಕಲ್ಲು ಹೊಡೆದು ಸಾಯಿಸಲಾಗುವುದು ಎಂಬುದಾಗಿ ಹೊಸ ಕಾನೂನಿನಲ್ಲಿ ಹೇಳಲಾಗಿದೆ.

ಈ ನೂತನ ಕಠಿಣ ಕಾನೂನುಗಳನ್ನು 2014ರಲ್ಲೇ ಘೋಷಿಸಲಾಗಿತ್ತು ಹಾಗೂ ಹಂತ ಹಂತವಾಗಿ ಅವುಗಳನ್ನು ಜಾರಿಗೆ ತರಲಾಗಿದೆ. ಅಮಾನುಷ ನೂತನ ವಿಧಿಗಳು ಸೇರಿದಂತೆ ಜಾರಿ ಪ್ರಕ್ರಿಯೆಯ ಇತ್ತೀಚಿನ ಹಂತವನ್ನು ಬ್ರೂನೈ ಅಟಾರ್ನಿ ಜನರಲ್‌ರ ವೆಬ್‌ಸೈಟ್‌ನಲ್ಲಿ 2018 ಡಿಸೆಂಬರ್ 29ರಂದು ಸದ್ದಿಲ್ಲದೆ ಪ್ರಕಟಿಸಲಾಗಿದೆ.

ಕಳ್ಳತನಕ್ಕಾಗಿ ಕೈಕಡಿಯುವ ಶಿಕ್ಷೆಯನ್ನೂ ನೂತನ ಕಾನೂನಿನಲ್ಲಿ ಘೋಷಿಸಲಾಗಿದೆ.

►ಮಾನವಹಕ್ಕು ಗುಂಪುಗಳ ಆಘಾತ

ಈ ಭಯಾನಕ ಶಿಕ್ಷೆಗಳು ಗಮನಕ್ಕೆ ಬಂದ ತಕ್ಷಣ ಮಾನವಹಕ್ಕು ಗುಂಪುಗಳು ಆಘಾತ ವ್ಯಕ್ತಪಡಿಸಿವೆ.

‘‘ಈ ಭೀಕರ ಶಿಕ್ಷೆಗಳ ಜಾರಿಯನ್ನು ಬ್ರೂನೈ ತಕ್ಷಣ ನಿಲ್ಲಿಸಬೇಕು ಹಾಗೂ ಮಾನವಹಕ್ಕು ಬದ್ಧತೆಗಳಿಗೆ ಅನುಗುಣವಾಗಿ ದಂಡ ಸಂಹಿತೆಯನ್ನು ಪರಿಷ್ಕರಿಸಬೇಕು. ಈ ಕ್ರೂರ ಶಿಕ್ಷಾ ಪದ್ಧತಿಗಳನ್ನು ಬ್ರೂನೈ ಜಾರಿಗೆ ತರುವ ಮುನ್ನ ಅಂತರ್‌ರಾಷ್ಟ್ರೀಯ ಸಮುದಾಯ ಅವುಗಳನ್ನು ತಕ್ಷಣ ಖಂಡಿಸಬೇಕು’’ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನಲ್ಲಿ ಬ್ರೂನೈ ಸಂಶೋಧಕಿಯಾಗಿರುವ ರಾಚೆಲ್ ಚೋ-ಹೊವಾರ್ಡ್ ಹೇಳಿಕೆಯೊಂದರಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News