ಮಸೂದ್ ಅಝರ್‌ನನ್ನು ಉಗ್ರ ಪಟ್ಟಿಗೆ ಸೇರಿಸಲು ಪಾಕ್ ಶರತ್ತು

Update: 2019-03-28 15:06 GMT

ಇಸ್ಲಾಮಾಬಾದ್, ಮಾ. 28: ಗಡಿಯಲ್ಲಿನ ಸೇನಾ ಉದ್ವಿಗ್ನತೆಯನ್ನು ನಿವಾರಿಸಲು ಹಾಗೂ ಕಾಶ್ಮೀರ ಸೇರಿದಂತೆ ಎಲ್ಲ ಪ್ರಮುಖ ವಿಷಯಗಳ ಬಗ್ಗೆ ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಮಾತುಕತೆಯನ್ನು ಮುಂದುವರಿಸಲು ಭಾರತ ಒಪ್ಪಿಕೊಂಡರೆ, ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್ ಸ್ಥಾಪಕ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಗೆ ಸೇರಿಸುವ ನಿರ್ಣಯಕ್ಕೆ ವಿಧಿಸಲಾಗಿರುವ ತಾಂತ್ರಿಕ ತಡೆಯನ್ನು ತೆರವುಗೊಳಿಸುವಂತೆ ಪಾಕಿಸ್ತಾನ ತನ್ನ ಮಿತ್ರದೇಶ ಚೀನಾಕ್ಕೆ ಸೂಚಿಸಿದೆ ಎಂಬುದಾಗಿ ಬಲ್ಲ ಮೂಲಗಳು ಹೇಳಿವೆ.

ನಿರ್ಣಯಕ್ಕೆ ತಾನು ವಿಧಿಸಿರುವ ತಾಂತ್ರಿಕ ತಡೆಗೆ ನಿರ್ದಿಷ್ಟ ಕಾರಣಗಳನ್ನು ನೀಡಲು ಚೀನಾಕ್ಕೆ ವಿಧಿಸಲಾಗಿರುವ ಗಡುವು ಈ ವಾರ ಮುಕ್ತಾಯಗೊಳ್ಳುತ್ತದೆ. ಆ ಬಳಿಕ, ಅಮೆರಿಕವು, ಮಸೂದ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಇತರ ಮಾರ್ಗಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಈ ವಿಷಯದ ಬಗ್ಗೆ ವಿಶ್ವಸಂಸ್ಥೆಯ ಮಹಾಧಿವೇಶನಲ್ಲಿ ಬಹಿರಂಗವಾಗಿ ಚರ್ಚಿಸುವುದು ಇಂಥ ಒಂದು ವಿಧಾನವಾಗಿದೆ. ಇದು ಚೀನಾವನ್ನು ಮುಜುಗರಕ್ಕೆ ಸಿಲುಕಿಸಬಹುದಾಗಿದೆ.

ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರವರಿ 14ರಂದು ಸಿಆರ್‌ಪಿಎಫ್ ಯೋಧರ ವಾಹನಗಳ ಸಾಲಿನ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 40 ಯೋಧರು ಹುತಾತ್ಮರಾಗಿರುವುದನ್ನು ಸ್ಮರಿಸಬಹುದಾಗಿದೆ. ಈ ದಾಳಿಯ ಹೊಣೆಯನ್ನು ಜೈಶೆ ಮುಹಮ್ಮದ್ ವಹಿಸಿಕೊಂಡಿದೆ.

ಪಾಕಿಸ್ತಾನದ ಪೂರ್ವ ಶರತ್ತುಗಳನ್ನು ಚೀನಾವು ಅಮೆರಿಕದ ಗಮನಕ್ಕೆ ತಂದಿದೆ ಎಂಬುದಾಗಿ ನ್ಯೂಯಾರ್ಕ್‌ನಲ್ಲಿರುವ ಭಾರತ ಮತ್ತು ಅಮೆರಿಕದ ರಾಜತಾಂತ್ರಿಕರು ಹೇಳಿದ್ದಾರೆ. ಆದರೆ, ಈ ಬಗ್ಗೆ ಅಮೆರಿಕದ ಟ್ರಂಪ್ ಆಡಳಿತ ನಿರಾಸಕ್ತಿ ವ್ಯಕ್ತಪಡಿಸಿದೆ ಹಾಗೂ ಅಝರ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವುದಕ್ಕೂ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಪುನರಾರಂಭಗೊಳ್ಳುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಅದು ಚೀನಾಕ್ಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News