ಭಾರತ ಹೆಸರಿಸಿರುವ 22 ಸ್ಥಳಗಳಲ್ಲಿ ಉಗ್ರ ತರಬೇತಿ ಶಿಬಿರಗಳಿಲ್ಲ: ಪಾಕ್

Update: 2019-03-28 15:07 GMT

ಇಸ್ಲಾಮಾಬಾದ್, ಮಾ. 28: ಭಯೋತ್ಪಾದಕರ ತರಬೇತಿ ಶಿಬಿರಗಳಿವೆ ಎಂಬುದಾಗಿ ಆರೋಪಿಸಿ ಭಾರತ ಹೆಸರಿಸಿರುವ 22 ಸ್ಥಳಗಳಲ್ಲಿ ತನಿಖೆ ನಡೆಸಲಾಗಿದೆ, ಆದರೆ ಅಲ್ಲಿ ಯಾವುದೇ ತರಬೇತಿ ಶಿಬಿರಗಳು ಪತ್ತೆಯಾಗಿಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

ಅದೇ ವೇಳೆ, ಪುಲ್ವಾಮ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಬಂಧಿಸಲಾಗಿರುವ 54 ಮಂದಿಯನ್ನು ಶಿಕ್ಷಿಸಲು ಪುರಾವೆಯಿಲ್ಲ ಎಂಬುದಾಗಿಯೂ ಅದು ಹೇಳಿದೆ.

ತನಿಖೆಯ ಪ್ರಾಥಮಿಕ ವರದಿಯನ್ನು ಪಾಕಿಸ್ತಾನವು ಭಾರತಕ್ಕೆ ನೀಡಿದೆ.

ಪಟ್ಟಿ ಮಾಡಿರುವ ಸ್ಥಳಗಳಿಗೆ ಭೇಟಿ ನೀಡಲು ಭಾರತ ಬಯಸಿದರೆ, ಪಾಕಿಸ್ತಾನವು ಸಹಾಯ ಮಾಡಬಹುದಾಗಿದೆ ಎಂದು ಪಾಕಿಸ್ತಾನ ವಿದೇಶ ಕಚೇರಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಬಂಧಿಸಲಾಗಿರುವ 54 ಮಂದಿಯನ್ನು ತನಿಖೆಗೊಳಪಡಿಸಲಾಗುತ್ತಿದೆಯಾದರೂ, ಪುಲ್ವಾಮ ದಾಳಿಗೆ ಅವರ ನಂಟು ಕಲ್ಪಿಸುವ ವಿವರಗಳು ಈವರೆಗೆ ಪತ್ತೆಯಾಗಿಲ್ಲ’’ ಎಂದಿದೆ.

‘‘ಹಾಗೆಯೇ, ಭಾರತ ಒದಗಿಸಿರುವ 22 ಸ್ಥಳಗಳಲ್ಲಿಯೂ ತನಿಖೆ ನಡೆಸಲಾಗಿದೆ. ಭಾರತ ಹೇಳಿರುವಂತೆ ಅಲ್ಲಿ ಭಯೋತ್ಪಾದಕ ಶಿಬಿರಗಳು ಅಸ್ತಿತ್ವದಲ್ಲಿಲ್ಲ. ಭಾರತ ಬಯಸಿದರೆ, ಈ ಸ್ಥಳಗಳಿಗೆ ಭೇಟಿ ನೀಡಲು ಅದಕ್ಕೆ ನೆರವು ನೀಡಲು ಪಾಕ್ ಬದ್ಧವಾಗಿದೆ’’ ಎಂದು ಪಾಕ್ ವಿದೇಶ ಕಚೇರಿ ತಿಳಿಸಿದೆ.

ಭಾರತದೊಂದಿಗೆ ಸಹಕರಿಸುವ ತನ್ನ ಬದ್ಧತೆಯ ಭಾಗವಾಗಿ, ಪಾಕಿಸ್ತಾನವು ತನ್ನ ತನಿಖೆಯ ಪ್ರಾಥಮಿಕ ವರದಿಯನ್ನು ಬುಧವಾರ ಭಾರತದೊಂದಿಗೆ ಹಂಚಿಕೊಂಡಿದೆ ಎಂದು ಅದು ಹೇಳಿದೆ.

‘‘ಆ ಬಳಿಕ, ಇಸ್ಲಾಮಾಬಾದ್‌ನಲ್ಲಿರುವ ರಾಜತಾಂತ್ರಿಕ ಪ್ರತಿನಿಧಿಗಳಿಗೆ ವಿವರಣೆ ನೀಡಲಾಗಿದೆ’’ ಎಂದಿದೆ.

ಪುಲ್ವಾಮ ದಾಳಿಯಲ್ಲಿ ಪಾಕಿಸ್ತಾನದಲ್ಲಿ ನೆಲೆಸಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಶಾಮೀಲಾತಿ ಬಗ್ಗೆ ನಿರ್ದಿಷ್ಟ ವಿವರಗಳನ್ನೊಳಗೊಂಡ ದಾಖಲೆಯನ್ನು ಭಾರತ ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನದ ಉಸ್ತುವಾರಿ ಹೈಕಮಿಶನರ್‌ಗೆ ಫೆಬ್ರವರಿ 27ರಂದು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News