ಸಾಮಾಜಿಕ ಜಾಲತಾಣದಲ್ಲಿ ಪ್ರಚಾರದ ಬಗ್ಗೆ ನಿಗಾ ವಹಿಸಿ: ಚುನಾವಣಾ ಸಿಬ್ಬಂದಿಗಳಿಗೆ ಕೇಂದ್ರ ವೀಕ್ಷಕರ ಸೂಚನೆ
ಉಡುಪಿ, ಮಾ. 28: ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರ ನಡೆಸುವುದರ ವಿರುದ್ಧ ತೀವ್ರ ನಿಗಾ ಇಡಬೇಕು. ಸಾಮಾಜಿಕ ಜಾಲತಾಣಗಳು ಇಲೆಕ್ಟ್ರಾನಿಕ್ ಮಾಧ್ಯಮವಾಗಿರುವುದರಿಂದ, ಅವುಗಳಲ್ಲಿ ನಡೆಸುವ ಯಾವುದೇ ಪ್ರಚಾರಕ್ಕೆ ಪೂರ್ವಾನುಮತಿ ಪಡೆದಿರಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕೇಂದ್ರ ವೀಕ್ಷಕ ಕೃಷ್ಣ ಕುನಾಲ್ ಹೇಳಿದ್ದಾರೆ.
ಗುರುವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಚುನಾವಣಾ ಅಧಿಕಾರಿಗಳ ಜಂಟೀ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು
ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳವಾಗಲು ಇನ್ನಷ್ಟು ಪರಿಣಾಮಕಾರಿಯಾದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಮತದಾರರಿಗೆ ಮತದಾನಕ್ಕೆ ಅಡ್ಡಿಪಡಿಸುವ ಯಾವುದೇ ವ್ಯಕ್ತಿ ಅಥವಾ ಸಮಸ್ಯೆ ಗಳನ್ನು ಮೊದಲೇ ಗುರುತಿಸಿ, ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಚುನಾವಣಾ ವೀಕ್ಷಕರು ಉಭಯ ಜಿ್ಲೆಗಳ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪ್ರತೀ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ತಮ್ಮ ವ್ಯಾಪಿಯ ಪ್ರತಿಯೊಂದು ಮತಗಟ್ಟೆಯ ಮತದಾರರ ಅಂಕಿಅಂಶ ಹಾಗೂ ವಿವರ ಸಂಗ್ರಹಿಸಿಟ್ಟಿರಬೇಕು. ಇದರಿಂದ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಕೈಬಿಟ್ಟಿರುವುದರ ಬಗ್ಗೆ ಯಾವುದೇ ದೂರು ಬಂದರೆ ಕೂಡಲೇ ಸ್ಪಂದಿಸ ಬಹುದಾಗಿದೆ. ಚುನಾವಣೆಯಲ್ಲಿ ಮತದಾನ ಮಾಡಲು ಎಪಿಕ್ ಕಾರ್ಡ್ ಅಥವಾ ವೋಟರ್ ಸ್ಲಿಪ್ ಇಲ್ಲದಿದ್ದರೆ ಇತರೆ 11 ಯಾವುದಾದರೂ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು. ಈ ಬಗ್ಗೆ ಮತದಾರರಿಗೆ ವ್ಯಾಪಕ ಪ್ರಚಾರ ನೀಡುವಂತೆ ಕೇಂದ್ರ ವೀಕ್ಷಕರು ತಿಳಿಸಿದರು.
ಜಿಲ್ಲೆಯ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರು ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಮತಗಟ್ಟೆಗಳಲ್ಲಿ ಎಲ್ಲಾ ಸೌಲಭ್ಯಗಳು ಇರುವಂತೆ ಆಯಾ ಎಆರ್‌ಓಗಳು ಖುದ್ದು ಭೇಟಿ ನೀಡಿ ಗಮನ ಹರಿಸಬೇಕು. ಚುನಾವಣೆ ದಿನ ಆಯಾ ಮತಗಟ್ಟೆಯ ಹೊರಗಡೆ, ಮತಗಟ್ಟೆಯ ಮಾಹಿತಿ ನೀಡುವ ಬ್ಯಾನರ್ ಅಳವಡಿಸಬೇಕು ಎಂದು ಕೃಷ್ಣ ಕುನಾಲ್ ಸೂಚಿಸಿದರು.
ಚುನಾವಣಾ ಸಿಬ್ಬಂದಿಗಳಿಗೆ ತರಬೇತಿಯನ್ನು ಪರಿಣಾಮಕಾರಿಯಾಗಿ ನೀಡಬೇಕು. ಇದರಿಂದ ಮತದಾನ ದಿನದಂದು ಮತಗಟ್ಟೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೂ ತ್ವರಿತವಾಗಿ ಪರಿಹರಿಸಬಹುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕೇಂದ್ರ ಚುನಾವಣಾ ಆಯೋಗದ ಪೊಲೀಸ್ ವೀಕ್ಷಕ ಸಂದೀಪ್ ಪ್ರಕಾಶ್ ಕಾರ್ಣಿಕ್ ಮಾತನಾಡಿ, ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಅ್ಯರ್ಥಿಗಳುಯಾವುದೇ ಪ್ರಚೋದನಕಾರಿ ಭಾಷಣ ಮಾಡಿದರೆ ತಕ್ಷಣವೇ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಚುನಾವಣಾ ಪ್ರಚಾರದಲ್ಲಿ ಅ್ಯರ್ಥಿಗಳು ತಮ್ಮ ಪಕ್ಷಗಳ ನೀತಿ ಹಾಗೂ ಸಾಧನೆಗಳ ಬಗ್ಗೆ ಮಾತನಾಡ ಬಹುದು. ಆದರೆ ಯಾವುದೇ ರೀತಿಯಲ್ಲಿ ಪರಸ್ಪರ ಸಾಮರಸ್ಯಕ್ಕೆ ಭಂಗ ತರುವಂತೆ ಪ್ರಚಾರ ಕೈಗೊಂಡರೆ ತಕ್ಷಣವೇ ಈ ಬಗ್ಗೆ ಕ್ರಮ ಜರುಗಿಸಬೇಕು. ಚೆಕ್‌ಪೋಸ್ಟ್ ತಪಾಸಣೆಗಳನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂದರು.
ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ತಮ್ಮ ಜಿಲ್ಲೆಗಳಲ್ಲಿ ನಡೆದಿರುವ ಚುನಾವಣಾ ಸಿದ್ಧತೆಗಳ ಬಗ್ಗೆ ಕೇಂದ್ರ ವೀಕ್ಷಕರಿಗೆ ವಿವರ ನೀಡಿದರು.
ಸಭೆಯಲ್ಲಿ ಉಡುಪಿ ಜಿಪಂ ಸಿಇಓ ಸಿಂಧೂ ಬಿ. ರೂಪೇಶ್, ಚಿಕ್ಕಮಗಳೂರು ಸಿಇಓ ಅಶ್ವಥಿ, ಉಭಯ ಜಿಲ್ಲೆಗಳ ಎಸ್‌ಪಿಗಳಾದ ನಿಶಾ ಜೇಮ್ಸ್, ಹರೀಶ್ ಪಾಂಡೆ, ಅಪರ ಜಿಲ್ಲಾಧಿಕಾರಿಗಳಾದ ವಿದ್ಯಾಕುಮಾರಿ ಹಾಗೂ ಕುಮಾರ್ ಉಪಸ್ಥಿತರಿದ್ದರು.