×
Ad

ಯೋಜನೆಗಳ ಹೆಸರಿನಲ್ಲಿ ಪಶ್ಚಿಮ ಘಟ್ಟಯ ನಾಶ: ದಿನೇಶ್ ಹೊಳ್ಳ

Update: 2019-03-28 21:25 IST

ಉಡುಪಿ, ಮಾ.28: ವಿವಿಧ ಯೋಜನೆಗಳ ಹೆಸರಿನಲ್ಲಿ ಅತ್ಯಂತ ಸೂಕ್ಷ್ಮ ಪರಿಸರ ಹೊಂದಿರುವ ಪಶ್ಚಿಮಘಟ್ಟ ನಾಶವಾಗುತ್ತಿದೆ. ಪಶ್ಚಿಮಘಟ್ಟದಲ್ಲಿರುವ ಸೂಕ್ಷ್ಮ ಪ್ರದೇಶಗಳಾದ ನದಿ ಮೂಲಗಳ ಮೇಲೂ ಅತಿಕ್ರಮಣವಾಗುತಿದ್ದು, ನದಿ ಮೂಲ ಬಡಕಲಾಗುತ್ತಿದೆ. ಒಮ್ಮೆ ನದಿ ಮೂಲ ಅಳಿದರೆ ಯಾವ ತಂತ್ರಜ್ಞಾನದಿಂದಲೂ ಅದರ ಮರುಸೃಷ್ಟಿ ಅಸಾಧ್ಯ ಎಂದು ಖ್ಯಾತ ಕಲಾವಿದ ಹಾಗೂ ಪರಿಸರ ಹೋರಾಟಗಾರ ಮಂಗಳೂರಿನ ದಿನೇಶ್ ಹೊಳ್ಳ ಎಚ್ಚರಿಸಿದ್ದಾರೆ.

ಉಡುಪಿ ಕುಂಜಿಬೆಟ್ಟಿನ ಡಾ. ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಮಾಧವ ಮಂದಿರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಡಾ.ಬಿ.ಎಲ್. ಶಂಕರನಾರಾಯಣ ಸಂಸ್ಮರಣ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನದಿ ತಿರುಗಿಸುವಿಕೆ ಮತ್ತು ನದಿಗಳ ಜೋಡಣೆ’ ವಿಷಯದ ಕುರಿತು ಅವರು ಮಾತನಾಡುತಿದ್ದರು.

ಪಶ್ಚಿಮ ಘಟ್ಟದ ಮೇಲೆ ವಾಣಿಜ್ಯ ದೃಷ್ಟಿ ಬಿದ್ದ ಅನಂತರ ಅಪಾಯ ಉಂಟಾಗಿದೆ. ಆದುದರಿಂದ ಪಶ್ಚಿಮ ಘಟ್ಟಕ್ಕೆ ಮಾರಣಾಂತಿಕವಾದ ಯೋಜನೆಗಳನ್ನು ತಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಎತ್ತಿನಹೊಳೆ ಯೋಜನೆ ವಿರುದ್ಧದ ಹೋರಾಟದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ದಿನೇಶ್ ಹೊಳ್ಳ ವಿವರಿಸಿದರು.

ನದಿ ತಿರುವು ಯೋಜನೆಯಿಂದ ದುರಂತ ಉಂಟಾಗಬಹುದು. ನದಿ ಜೋಡಣೆ ಯೋಜನೆಯಿಂದ ಮಹಾದುರಂತವೇ ಸಂಭವಿಸಬಹುದು. ಇಂಥ ಯೋಜನೆಗಳನ್ನು ಪ್ರಪಂಚದ ಎಲ್ಲ ದೇಶಗಳು ಕೂಡ ತಿರಸ್ಕರಿಸಿವೆ. ಇಂತಹ ಯೋಜನೆಗಳ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾಡ್ಗಿಚ್ಚಿಗೆ ಮನುಷ್ಯನೇ ಕಾರಣ: ಇತ್ತೀಚಿನ ವರ್ಷಗಳಲ್ಲಿ ಕಾಡ್ಗಿಚ್ಚಿನ ಪ್ರಮಾಣ ಅಧಿಕವಾಗಿದೆ. ಪ್ರತಿಯೊಂದು ಕಾಡ್ಗಿಚ್ಚು ಕೂಡ ಮನುಷ್ಯನಿಂದಲೇ ಹುಟ್ಟಿ ಕೊಳ್ಳುತ್ತಿದೆ. ಕೆಲವೊಮ್ಮೆ ಚಾರಣಿಗರು ಕೂಡ ಕಾಡ್ಗಿಚ್ಚಿಗೆ ಕಾರಣರಾಗುತಿದ್ದಾರೆ. ಕಾಡ್ಗಿಚ್ಚಿನಿಂದ ಬೆಟ್ಟದ ಮೇಲಿನ ಹುಲ್ಲು ನಿರಂತರವಾಗಿ ನಾಶವಾದರೂ ಅದರಿಂದ ದುಷ್ಪರಿಣಾಮವುಂಟಾಗುತ್ತದೆ. ಕಾಡ್ಗಿಚ್ಚು ಉಂಟಾಗದಂತೆ ನೋಡಿ ಕೊಳ್ಳುವ ಜವಾಬ್ದಾರಿ ಕೂಡಾ ನಮ್ಮೆಲ್ಲರ ಮೇಲಿದೆ ಎಂದು ಹೊಳ್ಳ ಹೇಳಿದರು.

ಕಾಲೇಜಿನ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಶಕೀಲಾ ಸ್ವಾಗತಿಸಿದರು. ಮಮತಾ ಸಾವುಂತ್ ಅತಿಥಿಗಳನ್ನು ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News