×
Ad

ಪ್ರಮೋದ್ ಪಕ್ಷ ದ್ರೋಹಿ; ನೈಜ ಕಾಂಗ್ರೆಸಿಗರಿಗೆ ಬೇಸರ: ಶಾಸಕ ಭಟ್

Update: 2019-03-28 22:38 IST

ಉಡುಪಿ, ಮಾ.28: ಪ್ರಮೋದ್ ಮಧ್ವರಾಜ್ ಸ್ವಾರ್ಥದ ರಾಜಕಾರಣಿ, ಅವರಿಗೆ ಅಧಿಕಾರದ ದಾಹ ಜಾಸ್ತಿಯಾಗಿದೆ. ಹೀಗೆಂದು ಜಿಲ್ಲೆಯ ನೈಜ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಸರವಾಗಿದೆ. ಇದರಿಂದ ಈ ಬಾರಿ ಕಾಂಗ್ರೆಸ್ ಓಟು ಬಿಜೆಪಿ ಅಭ್ಯರ್ಥಿಗೆ ಬೀಳಲಿದೆ. ಹೀಗೆಂದು ಹೇಳಿದವರು ಉಡುಪಿ ಶಾಸಕ ಕೆ.ರಘುಪತಿ ಭಟ್.

ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಜಿಲ್ಲೆಯಲ್ಲಿ ಜೆಡಿಎಸ್‌ಗೆ ಯಾವುದೇ ನೆಲೆ ಇಲ್ಲ. ಜೆಡಿಎಸ್‌ನ ಒಬ್ಬನೇ ಒಬ್ಬ ಜಿಪಂ ಅಥವಾ ತಾಪಂ ಸದಸ್ಯನೂ ಜಿಲ್ಲೆಯಲ್ಲಿಲ್ಲ. ಗ್ರಾಪಂ ಸದಸ್ಯನೂ ಇಲ್ಲವೆನಿಸುತ್ತದೆ. ಇದರಿಂದ ನೈಜ ಕಾಂಗ್ರೆಸಿಗನ ಓಟು ಈ ಬಾರಿ ಬಿಜೆಪಿಗೆ ಎಂದು ಅವರು ವ್ಯಂಗ್ಯವಾಡಿದರು.

ಉಡುಪಿ ಜಿಲ್ಲೆಯಲ್ಲಿ ಅದರಲ್ಲೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಂತೂ ಮತದಾರರು ಮೋದಿ ಪರವಾದ ವಾತಾವರಣವಿದೆ. ಶೋಭಾರಿಗೆ ಮತ ನೀಡಿ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವಲ್ಲಿ ಜನ ಉತ್ಸುಕರಾಗಿದ್ದಾರೆ ಎಂದರು.

ಆದರೆ ಬಿಜೆಪಿಗೆ ಒಳ್ಳೆಯ ಹೋರಾಟ ನೀಡಬಹುದಾದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರು ಈಗ ಗೊಂದಲದಲ್ಲಿದ್ದಾರೆ. ಪ್ರಮೋದ್ ತನ್ನ ಸ್ವಾರ್ಥಕ್ಕಾಗಿ ಕಾಂಗ್ರೆಸ್‌ಗೆ ಮೋಸ ಮಾಡಿದರೆಂಬ ಭಾವನೆ ಅವರಲ್ಲಿದೆ. ತನ್ನನ್ನು ಶಾಸಕರನ್ನಾಗಿ, ಸಚಿವರನ್ನಾಗಿ ಮಾಡಿದ ಪಕ್ಷಕ್ಕೆ ಪ್ರಮೋದ್ ದ್ರೋಹ ಎಸಗಿದ್ದಾರೆ ಎಂದು ಅವರೆಲ್ಲಾ ಮಾತನಾಡಿಕೊಳ್ಳುತಿದ್ದಾರೆ ಎಂದರು.

ಬೆಂಗಳೂರಿನ ಕಾಂಗ್ರೆಸಿಗರು, ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧಿಸಲು ಖಡಾಖಂಡಿತ ನಿರಾಕರಿಸಿದ್ದರಿಂದ ಒಂದು ಕ್ಷೇತ್ರವನ್ನು ಜೆಡಿಎಸ್, ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕಾಯಿತು. ಆದರೆ ಉಡುಪಿಯಲ್ಲಿ ಪ್ರಮೋದ್ ಅಧಿಕಾರ ದಾಹದಿಂದ ದೇವೇಗೌಡರ ಮನೆಗೆ ಓಡಿಹೋಗಿ ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡು ಪಕ್ಷಕ್ಕೆ ದ್ರೋಹ ಎಸಗಿದರು ಎಂದು ರಘುಪತಿ ಭಟ್ ನುಡಿದರು.

ಇದರಿಂದ ಜಿಲ್ಲೆಯಲ್ಲಿ ಮೊದಲ ಬಾರಿ ಕಾಂಗ್ರೆಸಿಗರಿಗೆ ಓಟು ಹಾಕಲು ಅಭ್ಯರ್ಥಿಯೇ ಇಲ್ಲದಂತಾಗಿದೆ. ಹೀಗಾಗಿ ಅವರು ಕೈ ಚಿಹ್ನೆಯನ್ನು ಬಿಟ್ಟು ತಮಗೆ ಪರಿಚಿತವಾದ ಕಮಲದ ಚಿಹ್ನೆಗೆ ಮತ ಹಾಕುವುದಾಗಿ ಹೇಳುತಿದ್ದಾರೆ. ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಬಾಗಿಲು ಬಡಿದಿದ್ದ ಪ್ರಮೋದ್, ಪಕ್ಷದ ಗೇಟು ಹಾಕಿದ್ದರಿಂದ ಕಾಂಗ್ರೆಸ್‌ನಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಸೋತರು.ಈಗ ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್ ಬಾಗಿಲು ತಟ್ಟಿ ಅದರ ಚಿಹ್ನೆಯಲ್ಲಿ ಸ್ಪರ್ಧಿಸುತಿದ್ದಾರೆ ಎಂದರು.

ಚುನಾವಣೆ ನಂತರ ಪ್ರಮೋದ್ ಏನು ಮಾಡುತ್ತಾರೆ ಎಂಬ ಬಗ್ಗೆ ಅವರು ಕರಾವಳಿ ಜನರಿಗೆ ಸ್ಪಷ್ಟೀಕರಣ ನೀಡಬೇಕು. ಸೋತರೆ ಅವರ ನಿಲುವೇನು. ಅವರು ಅದೇ ಶಾಲು ಹಾಕಿಕೊಂಡು ಓಡಾಡುತ್ತಾರಾ ಎಂದು ಪ್ರಶ್ನಿಸಿದ ರಘುಪತಿ ಭಟ್, ಫಲಿತಾಂಶ ಬಂದ 24 ಗಂಟೆಯೂ ರಾಜ್ಯದ ಸಮ್ಮಿಶ್ರ ಸರಕಾರ ಉಳಿಯುವುದಿಲ್ಲ. ಆಗ ಪ್ರಮೋದ್‌ರ ನಿಲುವು ಏನಾಗಿರುತ್ತದೆ ಎಂದು ಭಟ್, ತನ್ನ ಹೈಸ್ಕೂಲ್ ಸಹಪಾಠಿಯನ್ನು ಪ್ರಶ್ನಿಸಿದರು.

ಕರಾವಳಿಗೆ ಅತ್ಯಂತ ಹೆಚ್ಚು ಅನ್ಯಾಯ ಮಾಡಿದ್ದು ಜೆಡಿಎಸ್ ಪಕ್ಷ. ಹಿಂದಿನ ಬಜೆಟ್‌ನಲ್ಲಿ ಕರಾವಳಿಗೆ ಯಾವುದೇ ಯೋಜನೆಯನ್ನು ಅವರು ನೀಡಲಿಲ್ಲ. ಅಲ್ಲದೇ ಇತ್ತೀಚೆಗೆ ಕರಾವಳಿ ಮತದಾರರು ತಿಳುವಳಿಕೆ ಇಲ್ಲದವರು ಹೇಳಿಕೆ ನೀಡಿ ಇಲ್ಲಿನ ಜನರನ್ನು ಅವಮಾನಿಸಿದ್ದಾರೆ. ಈ ಹೇಳಿಕೆ ಬಗ್ಗೆ ಪ್ರಮೋದ್ ತಕ್ಷಣ ಸ್ಪಷ್ಟೀಕರಣ ನೀಡಬೇಕು. ಸಿಎಂ ಕುಮಾರಸ್ವಾಮಿ ಕೂಡಲೇ ಕ್ಷಮೆ ಕೇಳಬೇಕು. ಕ್ಷಮೆ ಕೇಳಿಸುವ ಜವಾಬ್ದಾರಿ ಪ್ರಮೋದ್ ಮೇಲಿದೆ. ಇಲ್ಲದಿದ್ದರೆ ಕರಾವಳಿ ಜನ ಈ ಬಾರಿ ಸರಿಯಾದ ಬುದ್ದಿ ಕಲಿಸುತ್ತಾರೆ ಎಂದು ಭಟ್ ನುಡಿದರು.

ಮರಳು ಸಮಸ್ಯೆಗೆ ಪ್ರಮೋದೇ ಕಾರಣ: ಜಿಲ್ಲೆಯ ಮರಳು ಸಮಸ್ಯೆಗೆ ಕೇಂದ್ರ ಸರಕಾರ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ನಿಷ್ಕೃಿಯತೆ ಕಾರಣ ಎಂಬ ಪ್ರಮೋದ್ ಮಧ್ವರಾಜ್ ಅವರ ಆರೋಪವನ್ನು ತೀವ್ರವಾಗಿ ಖಂಡಿಸಿದ ಭಟ್, ಜಿಲ್ಲೆಯ ಮರಳು ಸಮಸ್ಯೆಗೆ ಪ್ರಮೋದ್ ಮಧ್ವರಾಜ್ ಅವರೇ ಜವಾಬ್ದಾರಿ ಎಂದು ಆರೋಪಿಸಿದರು.

ಈ ಬಗ್ಗೆ ಅವರು ಬಹಿರಂಗವಾಗಿ ನನ್ನೊಂದಿಗೆ ಚರ್ಚೆಗೆ ಬರಲಿ. ದಾಖಲೆಗಳೊಂದಿಗೆ ಬಂದು ನಾನಿದನ್ನು ಸಾಬೀತು ಪಡಿಸುತ್ತೇನೆ. ಸಿಆರ್‌ಝಡ್‌ನಲ್ಲಿ ಮರಳುಗಾರಿಕೆಗೆ ಕೇಂದ್ರದಿಂದ ತಡೆಯಿದೆ ಎನ್ನುತ್ತಾರೆ. ಯಾವ ತಡೆ ಇದೆ ಎಂದು ಹೇಳಲಿ ಎಂದು ಸವಾಲು ಹಾಕಿದ ಅವರು, ಕಳೆದ ನವೆಂಬರ್ ತಿಂಗಳಲ್ಲೇ ಕೇಂದ್ರ ಸರಕಾರ ಮರಳುಗಾರಿಕೆಗೆ ಹಸಿರುನಿಶಾನೆ ತೋರಿಸಿ ಆದೇಶ ಹೊರಡಿಸಿದ್ದರೂ, ಪ್ರಮೋದ್ ಅವರು ಸಿದ್ಧರಾಮಯ್ಯ ಮೂಲಕ ರಾಜ್ಯ ಸರಕಾರ ಹಾಗೂ ಜಿಲ್ಲಾದಿಕಾರಿಯೂ ಸೇರಿದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಮರಳುಗಾರಿಕೆ ಪ್ರಾರಂಭವಾಗದಂತೆ ಷಡ್ಯಂತ್ರ ಮಾಡುತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ಪ್ರಭಾಕರ ಪೂಜಾರಿ, ಮಹೇಶ ಠಾಕೂರ್, ಉಪೇಂದ್ರ ನಾಯಕ್, ಶ್ರೀಶ ನಾಯಕ್, ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.

ಟ್ಯಾಂಕರ್‌ನಲ್ಲಿ ನೀರು ಕೊಡಿ

ಉಡುಪಿ ನಗರಸಭಾ ವ್ಯಾಪ್ತಿಗೆ ಮೂರು ದಿನಗಳಿಗೊಮ್ಮೆ ನೀರು ಬಿಡುವ ನಗರಸಭೆಯ ನಿರ್ಧಾರವನ್ನು ಅವರು ಖಂಡಿಸಿದರು. ಈ ನಿರ್ಧಾರವನ್ನು ಜಿಲ್ಲಾದಿಕಾರಿ ಕೂಡಲೇ ವಾಪಾಸು ಪಡೆದು ಪ್ರತಿದಿನ ನೀರು ಬಿಡುವಂತೆ ಆಗ್ರಹಿಸಿದರು. ನೀರು ಸರಬರಾಜು ಇಲ್ಲದ ಕಡೆಗಳಿಗೆ ಕೂಡಲೇ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡುವಂತೆಯೂ ಅವರು ಒತ್ತಾಯಿಸಿದರು.

ನಗರಕ್ಕೆ ಮೂರು ದಿನಗಳಿಗೊಮ್ಮೆ ನೀರು ನೀಡುವುದಕ್ಕೆ ನನ್ನ ಸ್ಪಷ್ಟ ವಿರೋಧವಿದೆ. ಶಾಸಕನಾಗಿದ್ದರೂ ಈ ಬಗ್ಗೆ ಜಿಲ್ಲಾಧಿಕಾರಿ ನನ್ನೊಂದಿಗೆ ಒಂದು ಮಾತು ಕೇಳಿಲ್ಲ. ಪ್ರತಿದಿನ ನೀರು ನೀಡುವ ಕೆಲಸವನ್ನು ತಕ್ಷಣ ಮಾಡಬೇಕು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News