ಯುವಕನ ಮೇಲೆ ಅರಣ್ಯಾಧಿಕಾರಿಗಳಿಂದ ದೌರ್ಜನ್ಯ ಆರೋಪ: ಎಸ್.ಡಿ.ಪಿ.ಐ ಖಂಡನೆ

Update: 2019-03-28 17:50 GMT

ಭಟ್ಕಳ: ಇಲ್ಲಿನ ಅರಣ್ಯಾಧಿಕಾರಿಗಳು ಯುವಕರನ್ನು ಗುರಿಯಾಗಿಸಿಕೊಂಡು ಮೃಗೀಯ ವರ್ತನೆಗಿಳಿದಿದ್ದು ಇತ್ತಿಚೆಗೆ ತನ್ನ ಸ್ನೇಹಿತನ ಮನೆಗೆ ಹೋದ ಯುವಕರ ಮೇಲೆ ಸುಳ್ಳಾರೋಪ ಹೊರಸಿ ದೌರ್ಜನ್ಯವೆಸಗಿಸಿದ್ದಾರೆ ಎಂದು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ತೌಫೀಖ್ ಬ್ಯಾರಿ ಆರೋಪಿಸಿದ್ದು, ಅರಣಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ. 

ಈ ಕುರಿತಂತೆ ಗುರುವಾರ ಇಲ್ಲಿನ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದು ತಪ್ಪಿತಸ್ಥರ ವಿರುದ್ಧ ಶೀಘ್ರವೇ ಕ್ರಮ ಜರಗಿಸಬೇಕೆಂದು ಆಗ್ರಹಿಸಿದ್ದಾರೆ.

ಇತ್ತಿಚೆಗೆ ಭಟ್ಕಳ ತಾಲೂಕಿನ ಬೆಟ್ಕೂರ್ ನ ಕೊಪ್ಪದಲ್ಲಿರುವ ತನ್ನ ಸ್ನೇಹಿತ ಮನೆಯಿಂದ ಹಿಂತಿರುಗುವಾಗ ಅಡ್ಡಗಟ್ಟಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಮೈರ್ ಸೈಯ್ಯದ್ ರುಕ್ನುದ್ದೀನ್ ಎಂಬ ಯುವಕನನ್ನು ಸುಳ್ಳಾರೋಪದಲ್ಲಿ ಬಂಧಿಸಿ ಆತನ ಮೇಲೆ ಮಾರಾಣಾಂತಿಕ, ಭೀಭತ್ಸಕ ರೀತಿಯಲ್ಲಿ ದೌರ್ಜನ್ಯವೆಸಗಿದ್ದಲ್ಲದೆ, ಹಣೆಗೆ ಬಂದೂಕನ್ನಿಟ್ಟು ‘ನಿನ್ನನ್ನು ಸಾಯಿಸುತ್ತೇವೆ’ ಎಂದು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆತನ ಪತ್ನಿ ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣೆಯಲ್ಲ ಪ್ರಕರಣ ದಾಖಲಿಸಿ ನ್ಯಾಯದ ಮೊರೆ ಹೋಗಿದ್ದಾರೆ. 

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಸ್.ಡಿ.ಪಿ.ಐ. ಈ ಬಗ್ಗೆ ದೌರ್ಜನ್ಯಕ್ಕೊಳಗಾದ ಸಂತ್ರಸ್ತರನ್ನು ಭೇಟಿಯಾಗಿ ಘಟನೆಯ ಕುರಿತಂತೆ ಮಾಹಿತಿ ಕಲೆಹಾಕಿದ್ದಾರೆ. ಅರಣ್ಯ ಅಧಿಕಾರಿಗಳ ಅಮಾನವೀಯ ದೌರ್ಜನ್ಯ ಅಧಿಕಾರಿಗಳ ಮೇಲೆ ಹಲವು ರೀತಿಯ ಸಂಶಯಗಳನ್ನು ಹುಟ್ಟು ಹಾಕಿದೆ ಎಂದು ಎಸ್.ಡಿ.ಪಿ.ಐ ಮನವಿ ಪತ್ರದಲ್ಲಿ ಆರೋಪಿಸಿದೆ.

ಅರಣ್ಯ ಅಧಿಕಾರಿಗಳ ದೌರ್ಜನ್ಯದ ಕುರಿತಂತೆ ಇಲಾಖೆಯ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು, ಅವರನ್ನು ಕೆಲಸದಿಂದ ಅಮಾನತ್ತುಗೊಳಿಸಬೇಕು ಹಾಗೂ ಸಂತೃಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಎಸ್.ಡಿ.ಪಿ.ಐ ಉತ್ತರಕನ್ನಡ ಜಿಲ್ಲಾಧ್ಯಕ್ಷ ತೌಫೀಕ್ ಬ್ಯಾರಿ ಮನವಿಯಲ್ಲಿ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News