×
Ad

ಅಂತರ್ಜಾಲ ಮೂಲಕ ಹಣ ಪಡೆದು ವಂಚನೆ: ಇಬ್ಬರಿಗೆ ಜೈಲುಶಿಕ್ಷೆ

Update: 2019-03-28 23:25 IST

ಮಂಗಳೂರು, ಮಾ.28: ಅಂತರ್ಜಾಲ ಮೂಲಕ ಸಂಪರ್ಕಿಸಿ ಲಕ್ಷಾಂತರ ರೂ. ಹಣ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಇಬ್ಬರು ಅಪರಾಧಿ ಕಾರಿಗಳಿಗೆ 1 ವರ್ಷ 9 ತಿಂಗಳು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ 3ನೇ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.

ಹೊಸದಿಲ್ಲಿಯ ಐಝಾವಾಲ್ ಜಿಲ್ಲೆ ನಿವಾಸಿ ಲಾಲ್‌ತಾನ್ ಮಾವಿಯಾ (36), ಮಣಿಪುರ ಚುರಚಾಂದ್ ನಿವಾಸಿ ಕೂಕ್ ಬೊಯಿ(33) ಶಿಕ್ಷೆಗೊಳಗಾದ ಅಪರಾಧಿಗಳು.

ಪ್ರಕರಣ ವಿವರ: ಆರೋಪಿಗಳು 2017ರ ಮೇ 9ರಂದು ಮೋಸ ಮಾಡುವ ಉದ್ದೇಶದಿಂದ ಉಳ್ಳಾಲ ಠಾಣಾ ವ್ಯಾಪ್ತಿಯ ನಿವಾಸಿ ವಾಯಿಲೆಟ್ ಡಿಸೋಜ ಅವರನ್ನು ಅವರ ಸ್ನೇಹಿತೆ ಲಂಡನ್‌ನಲ್ಲಿರುವ ಗುಡ್‌ಸನ್ ವಿಲ್ಫ್ರೆಡ್ ಹೆಸರಿನಿಂದ ಸಂಪರ್ಕಿಸಿ ಪಾರ್ಸೆಲ್ ಮೂಲಕ 28ಸಾವಿರ ಪೌಂಡ್ ವಿದೇಶಿ ಕರೆನ್ಸಿ ಮತ್ತು ಗ್‌ಟಿ ಕಳುಹಿಸಿ ಕೊಡುವುದಾಗಿ ಹಾಗೂ ಈ ಪಾರ್ಸೆಲ್ ಪಡೆದುಕೊಳ್ಳಲು ಕ್ಲಿಯರೆನ್ಸ್‌ಗಾಗಿ 21,58,200 ರೂ. ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ಪಡೆದುಕೊಂಡು ಮೋಸ ಮಾಡಿ ವಂಚಿಸಿದ್ದಾರೆ.

ಈ ಬಗ್ಗೆ 2017ರ ಮೇ 31ರಂದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು 2017ರ ಜೂ.11ರಂದು ಹೊಸದಿಲ್ಲಿಯಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜಪಡಿಸಿದ್ದರು. ಆರೋಪಿಗಳು ಜಾಮೀನು ಸಿಗದೆ ನ್ಯಾಯಾಂಗ ಬಂಧನದಲ್ಲಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 3ನೇ ನ್ಯಾಯಾಲಯ ಅಪರಾಧ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ 1ವರ್ಷ 9 ತಿಂಗಳು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಮೋಹನ್‌ಕುಮಾರ್ ಬಿ. ವಾದಿಸಿದ್ದರು. ಪ್ರಕರಣದ ತನಿಖಾಧಿಕಾರಿ ಗೋಪಿಕೃಷ್ಣ ಕೆ.ಆರ್. ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News