ಉಪ್ಪಿನಂಗಡಿ: ಕುಖ್ಯಾತ ವಂಚನೆ ಆರೋಪಿ ನಾಗೇಗೌಡ ಬಂಧನ

Update: 2019-03-29 11:10 GMT

ಉಪ್ಪಿನಂಗಡಿ: ವಂಚನೆ ಪ್ರಕರಣ ಸೇರಿದಂತೆ ಕರ್ನಾಟಕ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಸುಮಾರು 40 ರಿಂದ 50 ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕದ ಕೆ.ಎನ್. ನಾಗೇಗೌಡ (50) ಬಂಧಿತ ಆರೋಪಿ.

ಈತನ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸುಳ್ಯ ನ್ಯಾಯಾಲಯದಿಂದ ಒಂದು ವಾರಂಟ್, ಪುತ್ತೂರು ನ್ಯಾಯಲಯದಿಂದ 4 ವಾರಂಟ್, ಹಾಸನ ನ್ಯಾಯಾಲಯದಿಂದ 2 ವಾರಂಟ್, ಶಿವಮೊಗ್ಗ ನ್ಯಾಯಾಲಯದಿಂದ 2 ವಾರಂಟ್, ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ, ಯಲ್ಲಾಪುರ, ಗದಗ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳ ವಾರಂಟ್ ಇದ್ದು,  ಅಲ್ಲದೇ ಈತನ ವಿರುದ್ಧ ಕರ್ನಾಟಕ ರಾಜ್ಯದ ವಿವಿಧ ನ್ಯಾಯಾಲಯ ದಲ್ಲಿ ಹಲವಾರು ಸಿವಿಲ್ ಪ್ರಕರಣಗಳು, ಚೆನ್ನರಾಯಪಟ್ಟಣ ಠಾಣೆಯಲ್ಲಿ ಮಾನಭಂಗ ಯತ್ನ ಪ್ರಕರಣ ಅಲ್ಲದೇ  ಹಲವಾರು ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳ ವಾರಂಟ್‍ಗಳಿತ್ತು. ಆದರೆ ಈ ವಾರಂಟ್ ಕಾರ್ಯಗತಗೊಳಿಸಲು ಆರೋಪಿ ಈತನ ಮನೆ ಹಾಗೂ ಇತರ ಕಡೆಗಳಲ್ಲಿ ಸಿಗದೇ ತಲೆಮರೆಸಿಕೊಂಡಿದ್ದ. ಈತನ ಚಲನವಲನ ಬಗ್ಗೆ ಕಣ್ಣಿಟ್ಟಿದ್ದ ಉಪ್ಪಿನಂಗಡಿ ಪೊಲೀಸರು ಕೊನೆಗೂ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಆರೋಪಿಯ ಹಿನ್ನೆಲೆ: ನಾಗೇಗೌಡ ಅಲಿಯಾಸ್ ನಾಗೇಂದ್ರ ಪಿಯುಸಿ ತನಕ ವ್ಯಾಸಂಗ ಮಾಡಿದ್ದು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಯೆಲೆಯೂರು ಗ್ರಾಮದ ದಂಡಿಗನ ಹಳ್ಳಿ ಹೋಬಳಿಯ ನಿವಾಸಿ. 15 ವರ್ಷಗಳ ಹಿಂದೆ ಪೆರಿಯಡ್ಕದಲ್ಲಿ ಜಾಗ ಖರೀದಿಸಿ ತನ್ನ ಹೆಂಡತಿ ಮಕ್ಕಳೊಂದಿಗೆ ಇಲ್ಲಿ ವಾಸವಿದ್ದ. ಇಲ್ಲಿ ಈತ 2013ರಲ್ಲಿ ಪೆರಿಯಡ್ಕ ದಲ್ಲಿ ಟ್ರಸ್ಟ್ ವೊಂದನ್ನು ತೆರೆಯಲು ತೀರ್ಮಾಣಿಸಿ  ಸರಕಾರದಿಂದ ಅನುಮತಿ ಪಡೆದು ವೃದ್ದಾಶ್ರಮವನ್ನು ನಡೆಸುವ ಬಗ್ಗೆ  ಮಲ್ಟಿ ಪರ್ಪಸ್ ಡೆವಲಪ್ ಮೆಂಟ್ ಸರ್ವೀಸ್ ಟ್ರಸ್ಟ್ಎಂ ಬ ಸಂಸ್ಥೆಯನ್ನು ಸ್ಥಾಪಿಸಿದ್ದ. ಬಳಿಕ ಈ ಟ್ರಸ್ಟ್  ಹೆಸರಲ್ಲಿ ಕಡಿಮೆ ಬಡ್ಡಿಗೆ ಸಾಲ ಕೊಡುವುದಾಗಿ ವಿವಿಧ ಜಿಲ್ಲೆಗಳಿಗೆ ಹೋಗಿ ಪ್ರಚಾರ ಮಾಡಿ ಜನರನ್ನು ನಂಬಿಸಿದ್ದ. ಹೀಗೆ ಸಾಲಕ್ಕಾಗಿ ಬಂದವರಿಂದ ದೇಣಿಗೆ ರೂಪದಲ್ಲಿ ಹಣವನ್ನು ಪಡೆದು ಅವರಿಗೆ ಚೆಕ್ ನೀಡಿ ಹಣವನ್ನು ಮರುಪಾವತಿಸದೇ ಮೋಸ ಮಾಡಿದ್ದ. ಅಲ್ಲದೇ, ರಾಜ್ಯದ ಹಲವಾರು ಕಡೆಗಳಲ್ಲಿ ಕೆಲಸ ತೆಗೆಸಿಕೊಡುವುದಾಗಿ, ಜಾಗ ಮಾರಾಟ ಮಾಡಿಕೊಡುವುದಾಗಿ, ಸರಕಾರಿ ಉದ್ಯೋಗ ನೀಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ಜನರಿಗೆ ಮೋಸ ಮಾಡುತ್ತಿದ್ದ ಎನ್ನಲಾಗಿದ್ದು, ಹಣವನ್ನು ಟ್ರಸ್ಟ್ ನಲ್ಲಿ ಹೂಡಿಕೆ ಮಾಡಿ, ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ, ಸಾರ್ವಜನಿಕರಿಂದ  ಹಣವನ್ನು ಪಡೆದು, ಜನರಿಗೆ ಹಣವನ್ನು ಮರುಪಾವತಿಸದೇ ವಂಚಿಸುತ್ತಿದ್ದ ಎಂದು  ಈ ಬಗ್ಗೆ ಸಾರ್ವಜನಿಕ ವಲಯದಿಂದ ದೂರು ದಾಖಲಾಗಿತ್ತು.

ಈತ ಬೆಂಗಳೂರಿನಲ್ಲಿರುವ ಮಾಹಿತಿ ತಿಳಿದು ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ನಂದಕುಮಾರ್ ನೇತೃತ್ವದ ತಂಡ ಕೊನೆಗೂ ಹಲವಾರು ರೀತಿಯ ಅಡೆತಡೆಗಳನ್ನು ಭಾರೀ ಚಾಕಚಕ್ಯತೆಯಿಂದ ನಿಭಾಯಿಸಿ ಬೆಂಗಳೂರಿನಿಂದ ವಶಕ್ಕೆ ಪಡೆದಿದ್ದಾರೆ.

ಈತನ ಬಂಧನ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ ಪ್ರೊಬೆಷನರಿ ಸಹಾಯಕ ಪೊಲೀಸ್ ಅಧೀಕ್ಷಕ ಪ್ರದೀಪ್ ಗುಂಟಿ, ಪಿಎಸ್‍ಐ ನಂದಕುಮಾರ್, ಪ್ರೊಬೆಷನರಿ ಪಿಎಸ್‍ಐ ಪವನ್ ನಾಯಕ್, ಸಿಬ್ಬಂದಿ ಹರೀಶ್ಚಂದ್ರ, ಇರ್ಷಾದ್ ಭಾಗವಹಿಸಿದ್ದು, ದ.ಕ. ಜಿಲ್ಲಾ ಗಣಕಯಂತ್ರ ಸಿಬ್ಬಂದಿಗಳಾದ ಸಂಪತ್, ದಿವಾಕರ್ ಸಹಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News