×
Ad

ಸುಲ್ತಾನ್ ಅಝ್ಲಾನ್ ಶಾ ಕಪ್ ಹಾಕಿ: ಭಾರತದ ಗೋಲುಮಳೆಯಲ್ಲಿ ತೊಯ್ದ ಪೋಲೆಂಡ್

Update: 2019-03-29 19:58 IST

ಇಪೊ (ಮಲೇಶ್ಯ), ಮಾ.29: ತಮ್ಮ ಅದ್ಭುತ ಲಯವನ್ನು ಮುಂದುವರಿಸಿದ ಮಂದೀಪ್‌ಸಿಂಗ್ ಅವರ ಅವಳಿ ಗೋಲುಗಳ ನೆರವಿನಿಂದ ಭಾರತ ಹಾಕಿ ತಂಡ ತನಗಿಂತ ಕೆಳರ್ಯಾಂಕಿನ ಪೋಲೆಂಡ್‌ನ್ನು 10-0 ಭಾರೀ ಅಂತರದಿಂದ ಮಣಿಸಿ ಶನಿವಾರ ನಡೆಯುವ ಅಝ್ಲಾನ್ ಶಾ ಕಪ್ ಹಾಕಿ ಫೈನಲ್‌ಗೆ ಸಜ್ಜಾಗಿದೆ.

ಈಗಾಗಲೇ ಕೊರಿಯ ವಿರುದ್ಧದ ಫೈನಲ್ ಪಂದ್ಯಕ್ಕೆ ಸ್ಥಾನ ಖಚಿತಪಡಿಸಿಕೊಂಡಿರುವ ಭಾರತ ಈ ಪಂದ್ಯದಲ್ಲಿ ಗೋಲುಗಳ ಸುರಿಮಳೆಗರೆದು ಪೋಲೆಂಡ್‌ನ್ನು ನಿರಾಸೆಯ ಅಂಚಿಗೆ ತಳ್ಳಿತು.

ಪಂದ್ಯದ ಪ್ರಥಮಾರ್ಧದಲ್ಲಿ 6 ಗೋಲುಗಳನ್ನು ಸಿಡಿಸಿ ಬಂಪರ್ ಬೆಳೆ ತೆಗೆದ ಭಾರತ, ಉಳಿದ 30 ನಿಮಿಷಗಳಲ್ಲಿಯೂ ನಾಲ್ಕು ಗೋಲುಗಳನ್ನು ಬಾರಿಸಿ ಪಂದ್ಯವನ್ನು ಏಕಪಕ್ಷೀಯವಾಗುವಂತೆ ಮಾಡಿತು. ಆ ಮೂಲಕ ಭಾರತ ಟೂರ್ನಿಯಲ್ಲಿ ತನ್ನ ಅಜೇಯ ಓಟದ ವೇಗವನ್ನು ಕಾಪಾಡಿಕೊಂಡಿತು. 5 ಲೀಗ್ ಪಂದ್ಯಗಳ ಪೈಕಿ ಭಾರತ ನಾಲ್ಕು ಗೆಲುವು ಒಂದು ಡ್ರಾ ಸಾಧಿಸಿ ಒಟ್ಟು 13 ಅಂಕಗಳೊಂದಿಗೆ ಲೀಗ್ ಅಭಿಯಾನ ಕೊನೆಗೊಳಿಸಿದೆ.

ತಂಡದ ಪರ ಯುವ ಆಟಗಾರ ಮಂದೀಪ್ ಸಿಂಗ್ 50 ಹಾಗೂ 51ನೇ ನಿಮಿಷಗಳಲ್ಲಿ ಗೋಲು ಹೊಡೆದು ಟೂರ್ನಿಯಲ್ಲಿ ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು ಏಳಕ್ಕೆ ಏರಿಸಿಕೊಂಡರು. ಬುಧವಾರ ಕೆನಡಾ ವಿರುದ್ಧದ ಪಂದ್ಯದಲ್ಲಿ 24 ವರ್ಷದ ಆಟಗಾರ ಮಂದೀಪ್ ಹ್ಯಾಟ್ರಿಕ್ ಬಾರಿಸಿ ಗಮನಸೆಳೆದಿದ್ದರು.

ಈ ಪಂದ್ಯದಲ್ಲಿ ವರುಣ್‌ಕುಮಾರ್ (18ನೇ ಹಾಗೂ 25ನೇ ನಿಮಿಷ) ಕೂಡ ಎರಡು ಗೋಲು ಬಾರಿಸಿದರೆ ವಿವೇಕ್ ಪ್ರಸಾದ್ (1ನೇ ನಿಮಿಷ), ಸುಮಿತ್ ಕುಮಾರ್ (7ನೇ ನಿಮಿಷ), ಸುರೇಂದರ್ ಕುಮಾರ್ (19ನೇ ನಿಮಿಷ), ಸಿಮ್ರನ್‌ಜೀತ್ ಸಿಂಗ್ (29ನೇ ನಿಮಿಷ), ನೀಲಕಂಠ ಶರ್ಮಾ (36ನೇ ನಿಮಿಷ), ಅಮಿತ್ ರೋಹಿದಾಸ್ (55ನೇ ನಿಮಿಷ) ತಲಾ ಒಂದು ಗೋಲು ಹೊಡೆದು ಭಾರತದ ಭರ್ಜರಿ ಜಯಕ್ಕೆ ಕಾರಣವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News