×
Ad

ಕಾರ್ಕಳ: ವಿಶ್ವ ಕ್ಷಯರೋಗ ದಿನಾಚರಣೆ, ಮತದಾನ ಜಾಗೃತಿ ಕಾರ್ಯಕ್ರಮ

Update: 2019-03-29 20:14 IST

ಕಾರ್ಕಳ: ಉಡುಪಿ ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಛೇರಿ, ಕಾರ್ಕಳ ತಾ.ಪಂ., ತಾಲೂಕು ಆರೋಗ್ಯಾಧಿಕಾರಿ ಕಛೇರಿ, ಸರಕಾರಿ ಸಾರ್ವಜನಿಕ ಆಸ್ಪತ್ರೆ ಕ್ಷಯರೋಗ ನಿಯಂತ್ರಣ ಘಟಕ, ಶ್ರೀ ಭುವನೇಂದ್ರ ಕಾಲೇಜಿನ ರಾ.ಸೇ.ಯೋ. ಘಟಕದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ 2019 ಹಾಗೂ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಡಾ. ಮೇಜರ್ ಹರ್ಷ ಕೆ.ಬಿ. ಉದ್ಘಾಟಿಸಿ, ಕ್ಷಯರೋಗ ಒಂದು ಸಾಂಕ್ರಾಮಿಕ ರೋಗ. ಇದು ಮೈಕೋಬ್ಯಾಕ್ಟಿರಿಯಂ ಟ್ಯುಬಕ್ರ್ಯುಲೋಸಿಸ್ ಎಂಬ ಸೂಕ್ಷಾಣುವಿನಿಂದ ಬರುತ್ತದೆ. ರೋಗಿ ಕೆಮ್ಮಿದಾಗ, ಸೀನಿದಾಗ ಕ್ರಿಮಿಗಳು ಗಾಳಿಯಲ್ಲಿ ಸೇರಿ ಇತರರು ಉಸಿರಾಡುವಾಗ ಅವರ ದೇಹ ಪ್ರವೇಶಿಸಿ, ರೋಗ ಉಂಟು ಮಾಡುವುದು. ಕ್ಷಯರೋಗದ ಲಕ್ಷಣಗಳು, ಪತ್ತೆ ಹಚ್ಚುವ ವಿಧಾನ ಮತ್ತು ಗುಣಮಟ್ಟದ ಚಿಕಿತ್ಸಾ ಔಷಧಿಗಳು ಲಭ್ಯವಿದ್ದು ಸಕಾಲದಲ್ಲಿ, ಸಮರ್ಪಕ ಚಿಕಿತ್ಸೆ ಪಡೆದು ಕ್ಷಯರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕೆಂದರು. ಮತದಾನ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅತ್ಯಂತ ಪವಿತ್ರ ಕಾರ್ಯ. ಎಲ್ಲರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿ ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ತಪ್ಪದೇ ಮತ ಹಾಕಿರಿ ಎಂದು ಮತದಾನ ಜಾಗೃತಿ ಪ್ರತಿಜ್ಞಾ ವಿಧಿ ಭೋದಿಸಿ ವಿ.ವಿ.-ಪ್ಯಾಟ್ ಪ್ರಾತ್ಯಕ್ಷಿಕೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಮಾತನಾಡಿ, ಎರಡು ವಾರಗಳಿಂತ ಹೆಚ್ಚು ಸತತ ಕೆಮ್ಮು ಕಂಡುಬಂದಲ್ಲಿ ಅದು ಟಿ.ಬಿ. ಆಗಿರಲೂಬಹುದು. ತಕ್ಷಣ ಸರಕಾರಿ ಆಸ್ಪತ್ರೆಗೆ ತೆರಳಿ ಕಫ ಪರೀಕ್ಷೆ ಮಾಡಿಕೊಳ್ಳಬೇಕು. ಪ್ರಸ್ತುತ ಭಾರತದಲ್ಲಿ ಕ್ಷಯರೋಗವು ಮಾರಕವಾಗಿ ಪರಿಣಮಿಸಿದ್ದು ಅದನ್ನು ನಿಯಂತ್ರಿಸುವ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಬೇಕು ಎಂದರು. ಕೇಂದ್ರ ಸರಕಾರದ ಆಶಯದಂತೆ 2025ನೇ ವರ್ಷದ ಒಳಗೆ ಕ್ಷಯಮುಕ್ತ ಭಾರತವನ್ನಾಗಿ ಮಾಡುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಪುರಸಭಾ ಮುಖ್ಯಾಧಿಕಾರಿ ಮೇಬಲ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್, ಮಾನ್ಯ ಸಹಾಯಕ ಪ್ರಾಧ್ಯಾಪಕ ಶಿವಶಂಕರ್, ಸಹಾಯಕ ಪ್ರಾಧ್ಯಾಪಕಿ ಸುಚಿತ್ರ ಉಪಸ್ಥಿತರಿದ್ದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಕಳ ಕ್ಷಯ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಶಿವಕುಮಾರ್ ಹಾಗೂ ಹಿರಿಯ ಪ್ರಯೋಗಶಾಲಾ ಮೇಲ್ವಿಚಾರಕ ಹರಿಪ್ರಸಾದ್ ಕಾರ್ಯಕ್ರಮ ಆಯೋಜಿಸಿದರು. ಹಿರಿಯ ಆರೋಗ್ಯ ಸಹಾಯಕ ಬಿ.ವಿ. ಶಿವರಾಮ ರಾವ್ ಸ್ವಾಗತಿಸಿದರು. ಬ್ರಹ್ಮಾವರ ಕ್ಷಯ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಅಲಂದೂರು ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News