ಕಾಪುವಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ

Update: 2019-03-29 15:01 GMT

ಪಡುಬಿದ್ರಿ: ಯುಪಿಎ ಸರಕಾರ ಕರಾವಳಿಗೆ ನೀಡಿದ್ದ ಪಾಪದ ಕೊಡದಿಂದ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಯೋಜನೆ ವಿಳಂಬಕ್ಕೆ ಕಾರಣ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.

ಕಾಪು ಜೇಸಿ ಭವನದಲ್ಲಿ ಶುಕ್ರವಾರ ನಡೆದ ಕಾಪು ಪುರಸಭಾ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಿಂದಿನ ಯುಪಿಎ ಸರ್ಕಾರದಿಂದ ವಿಳಂಬವಾದ ಹೆದ್ದಾರಿ ಕಾಮಗಾರಿಯ ಅಪವಾದವನ್ನು ನಮ್ಮ ಮೇಲೆ ಹಾಕುವ ಪ್ರಯತ್ನ ನಡೆಯುತ್ತಿದೆ. ಆದರೂ ಕೂಡಾ ಕರಾವಳಿಯ ಜನರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರ ಮತ್ತು ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿ, ಗುತ್ತಿಗೆದಾರ ಕಂಪೆನಿಗೆ ಒತ್ತಡ ಹೇರಿ ಕಾಮಗಾರಿ ಪೂರ್ಣಗೊಳಿಸುವತ್ತ ನಮ್ಮ ಲಕ್ಷ್ಯ ವಹಿಸಲಾಗಿದೆ ಎಂದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಿತ್ರ ಪಕ್ಷ ಜೆಡಿಎಸ್‍ಗೆ ಬಿಟ್ಟುಕೊಡುವ ಮೂಲಕ ಕಾಂಗ್ರೆಸ್ ಪಕ್ಷ ಚುನಾವಣೆಗೆ ಮೊದಲೇ ಕ್ಷೇತ್ರವನ್ನು ಕೈಚೆಲ್ಲಿ ಬಿಟ್ಟಿದೆ. ಈಗ ಮೈತ್ರಿ ಧರ್ಮದ ಪಾಲನೆ ಎಂಬ ನಾಟಕದಡಿ ಮತದಾರರನ್ನು ಮರುಳು ಮಾಡಲು ಪ್ರಯತ್ನಿ ಸುತ್ತಿದೆ. ಅಧಿಕಾರದ ದಾಹಕ್ಕಾಗಿ ಕೆಟ್ಟ ಮಾದರಿಯ ಮೈತ್ರಿಯನ್ನು ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಈ ಲೋಕಸಭಾ ಚುನಾವಣೆಯಲ್ಲಿ ಮೂಲೆ ಗುಂಪಾಗಲಿದೆ. ಚುನಾವಣೆಯ ಬಳಿಕ ಅಧಿಕಾರವನ್ನೂ ಕಳೆದುಕೊಳ್ಳಲಿದೆ ಎಂದರು.

ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್,  ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಕಾಪು ಕ್ಷೇತ್ರ ಉಸ್ತುವಾರಿ ವಿಜಯ ಕೊಡವೂರು, ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಕಾಪು ಕ್ಷೇತ್ರ ಬಿಜೆಪಿ ವಿವಿಧ ಮೋರ್ಚಾಗಳ ಪ್ರಮುಖರಾದ ಪ್ರವೀಣ್ ಪೂಜಾರಿ, ಕೇಸರಿ ಯುವರಾಜ್, ಶೈಲೇಶ್ ಪೂಜಾರಿ, ಪುರಸಭಾ ಸದಸ್ಯರಾದ ಗುಲಾಬಿ ಪಾಲನ್, ರಮೇಶ್ ಹೆಗ್ಡೆ, ಅರುಣ್ ಶೆಟ್ಟಿ ಪಾದೂರು, ಸುಧಾ ರಮೇಶ್, ಮೋಹಿನಿ ಶೆಟ್ಟಿ, ಶಾಂಭವಿ ಕುಲಾಲ್, ಅನಿಲ್ ಕುಮಾರ್, ರಮಾ ವೈ ಶೆಟ್ಟಿ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಪು ಪುರಸಭಾ ವ್ಯಾಪ್ತಿಯ ಬಿಜೆಪಿ ಅಧ್ಯಕ್ಷ ಸಂದೀಪ್ ಶೆಟ್ಟಿ ಸ್ವಾಗತಿಸಿದರು. ಪುರಸಭಾ ಸದಸ್ಯ ಕಿರಣ್ ಆಳ್ವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News