×
Ad

‘ಮೇಲ್ತೆನೆ ಇ-ಮ್ಯಾಗಝಿನ್’ ಬಿಡುಗಡೆ

Update: 2019-03-29 20:58 IST

ಮಂಗಳೂರು, ಮಾ. 29: ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ ‘ಮೇಲ್ತೆನೆ’ ಸಂಘಟನೆಯ ವತಿಯಿಂದ ಪ್ರಕಟಗೊಳ್ಳುವ ‘ಮೇಲ್ತೆನೆ ಇ-ಮ್ಯಾಗಝಿನ್’ ಬಿಡುಗಡೆ ಕಾರ್ಯಕ್ರಮವು ಮಂಗಳೂರು ವಿವಿಯ ಬ್ಯಾರಿ ಅಧ್ಯಯನ ಪೀಠದ ಸಹಕಾರದೊಂದಿಗೆ ಶುಕ್ರವಾರ ಮಂಗಳೂರು ವಿವಿಯ ಸ್ಟಾಟಿಸ್ಟಿಕ್ಸ್ ಲೆಕ್ಟರ್ ಹಾಲ್‌ನಲ್ಲಿ ಜರುಗಿತು.

ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ‘ಮೇಲ್ತೆನೆ ಇ-ಮ್ಯಾಗಝಿನ್’ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು ಸಾವಿರಾರು ವರ್ಷಗಳ ಇತಿಹಾಸವಿರುವ ಬ್ಯಾರಿ ಭಾಷೆಯು ಕೆಲವು ವರ್ಷಗಳ ಹಿಂದೆಯಷ್ಟೇ ಜಗತ್ತಿಗೆ ಪರಿಚಯವಾದರೂ ಕೂಡ ಈ ಭಾಷೆಯ ಶ್ರೀಮಂತಿಕೆ ಅಪಾರವಾದುದು. ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಮಾತೃಭಾಷೆಗಳನ್ನು ಉಳಿಸುವುದು ಕಷ್ಟಕರವಾಗಿದೆ. ಮುಂದಿನ ಪೀಳಿಗೆಗೆ ಈ ಭಾಷೆಯನ್ನು ಪರಿಚಯಿಸುವ ಸಲುವಾಗಿ ಸಂಘಟನಾತ್ಮಕ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ‘ಮೇಲ್ತೆನೆ’ ಸಂಘಟನೆಯ ಪ್ರಯತ್ನ ಶ್ಲಾಘನೀಯ ಎಂದರು.

ಭಾಷೆ ಮತ್ತು ಸಂಸ್ಕೃತಿಯು ಜೀವನದ ಅವಿಭಾಜ್ಯ ಅಂಗವಾಗಿದೆ. ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆದರೆ ಮಾತ್ರ ನಮಗೆ ಭಾಷೆ, ಕಲೆ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಬಹುದಾಗಿದೆ. ಲಿಪಿ ಇಲ್ಲದ ಕೊರತೆಯ ಮಧ್ಯೆಯೂ ಭಾಷೆಯನ್ನು ಉಳಿಸುವ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ಪ್ರೊ.ಕಿಶೋರಿ ನಾಯಕ್ ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಮತ್ತು ಮಂಗಳೂರು ವಿವಿ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಬಿ. ಇಸ್ಮಾಯೀಲ್ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮೇಲ್ತೆನೆಯ ಉಪಾಧ್ಯಕ್ಷ ಮುಹಮ್ಮದ್ ಬಾಷಾ ನಾಟೆಕಲ್, ಜೊತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ, ‘ಮೇಲ್ತೆನೆ ಇ-ಮ್ಯಾಗಝಿನ್’ನ ಸಹ ಸಂಪಾದಕ ಬಶೀರ್ ಅಹ್ಮದ್ ಕಿನ್ಯ ಮತ್ತಿತರರು ಪಾಲ್ಗೊಂಡಿದ್ದರು.

ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಸ್ವಾಗತಿಸಿದರು. ಅಧ್ಯಕ್ಷ ಹಂಝ ಮಲಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ವಂದಿಸಿದರು. ‘ಮೇಲ್ತೆನೆ ಇ-ಮ್ಯಾಗಝಿನ್’ನ ಸಂಪಾದಕ ಇಸ್ಮತ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News